ಬೆಳಗಾವಿ :ಕೃಷ್ಣಾ ಮೇಲ್ದಂಡೆ ವಿಷಯದಲ್ಲಿ ಸುಪ್ರೀಂಕೋರ್ಟ್‍ನಲ್ಲಿ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ತೆಲಂಗಾಣ ಹಿಂಪಡೆದಿದೆ. ಕೃಷ್ಣಾ ಮೇಲ್ದಂಡೆ ನೀರು ರಾಜ್ಯದ ಪಾಲಿನ ಬಳಕೆಗೆ ಪೂರಕವಾದ ಅಧಿಸೂಚನೆ ಶೀಘ್ರವೇ ಹೊರ ಬೀಳುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸದನಕ್ಕೆ ತಿಳಿಸಿದರು.
ನೀರಾವರಿ ಯೋಜನೆ ಜಾರಿ ಸಂಬಂಧ ನಡೆದ ಚರ್ಚೆಗೆ ವಿಧಾನಸಭೆಗೆ ಉತ್ತರಿಸಿದ ಸಿಎಂ, ತೆಲಂಗಾಣ ತಾನು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಹಿಂಪಡೆದಿದೆ. ಬಹುಶಃ ಮುಂದಿನ ತಿಂಗಳ ವೇಳೆಗೆ ಕರ್ನಾಟಕದ ಪರ ತೀರ್ಪು ಬರಬಹುದು ಎಂಬ ಪರೋಕ್ಷ ಸೂಚನೆ ನೀಡಿದರು.
ಈ ವಿವಾದದ ಕುರಿತು ಎಷ್ಟು ಮಾತನಾಡಬೇಕು, ಎಷ್ಟು ಮಾತನಾಡಬಾರದು ಎಂಬುದು ನನಗೆ ಗೊತ್ತಿದೆ. ಏಕೆಂದರೆ, ಈ ಅಂತಾರಾಜ್ಯ ನದಿ ವಿವಾದದ ಬಗ್ಗೆ ಸದನಕ್ಕೆ ನೀಡಬೇಕಾದ ಮಾಹಿತಿ ಎಷ್ಟು ಎಂಬುದರ ಹೊಣೆಗಾರಿಕೆ ನನ್ನ ಮೇಲಿದೆ. ಆದರೆ, ಇಷ್ಟನ್ನು ಮಾತ್ರ ಹೇಳಬಲ್ಲೆ. ನಾನೇ ವಕೀಲರೊಂದಿಗೆ ಸಂಪರ್ಕದಲ್ಲಿರುವೆ. ಕೇಂದ್ರ ಸರ್ಕಾರ ತನ್ನ ನಿಲುವು ತಿಳಿಸುತ್ತಿದ್ದಂತೆ ಅಧಿಸೂಚನೆ ಹೊರ ಬೀಳಲಿದೆ. ಇದು ಆದಷ್ಟು ಶೀಘ್ರ ಆಗಲಿದೆ ಎಂದಷ್ಟೇ ಹೇಳುವೆ ಎಂದರು.
ನಾನು ಮುಖ್ಯಮಂತ್ರಿಯಾದ ನಂತರ ಸುಪ್ರೀಂಕೊರ್ಟ್ ಈ ಅರ್ಜಿಯನ್ನು ವೇಗವಾಗಿ ಕೈಗೆತ್ತಿಕೊಂಡು ಕೇಂದ್ರಕ್ಕೆ ತನ್ನ ನಿಲುವು ತಿಳಿಸುವಂತೆ ಆದೇಶಿಸಿದೆ. ಮುಂದಿನ ತಿಂಗಳು ವಿಚಾರಣೆ ನಿಗದಿಯಾಗಿದ್ದು, ಕೇಂದ್ರದ ನಿಲುವು ಸ್ಪಷ್ಟವಾಗಲಿದೆ. ತೆಲಂಗಾಣದಿಂದ ಎದುರಾಗಿದ್ದ ಅಡ್ಡಿ ದೂರವಾಗಿದೆ ಎಂಬುದನ್ನು ಮಾತ್ರ ನಾನು ಸದನಕ್ಕೆ ತಿಳಿಸಬಯಸುತ್ತೇನೆ.
ಮಹದಾಯಿಯ ವಿಷಯವೂ ಕೂಡ ಕೆಲವೇ ಕೆಲವು ದಿನಗಳಲ್ಲಿ ಬಗೆಹರಿಯಲಿದೆ. ಈ ವಿಷಯವಾಗಿ ಕೋರ್ಟಿನಲ್ಲಿರುವ ತಕರಾರು ಅರ್ಜಿಯ ವಿಚಾರಣಾ ಪ್ರಗತಿಯನ್ನು ಖುದ್ದಾಗಿ ಪರಿಶೀಲಿಸುತ್ತಿದ್ದು, ಶೀಘ್ರ ಮಹದಾಯಿ ನೀರಿನ ಪ್ರಯೋಜನ ರಾಜ್ಯಕ್ಕೆ ದೊರೆಯಲಿದೆ ಎಂದು ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಕೈ ನಾಯಕರ ಕಾಲೆಳೆದ ಹೆಚ್‍ಡಿಕೆ :ಇದಕ್ಕೂ ಮುನ್ನ ಉ-ಕ ಭಾಗದ ನೀರಾವರಿ ಯೋಜನೆ ಪ್ರಗತಿಯ ಬಗ್ಗೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಮಹದಾಯಿ ನೀರನ್ನು ನ್ಯಾಯಾಧೀಕರಣ ನಮಗೆ ಹಂಚಿಕೆ ಮಾಡಿದೆ. ಆದರೆ, ಇದರಲ್ಲಿ ಕೇಂದ್ರ ಜಲ ಆಯೋಗ ಕಳಸಾದಿಂದ ಇಷ್ಟು ಹಾಗೂ ಬಂಡೂರಿ ನಾಲಾದಿಂದ ಇಂತಿಷ್ಟು ಎಂಬ ಹಂಚಿಕೆ ಮಾಡಿದೆ. ಈ ರೀತಿ ನೀರನ್ನು ವಿಂಗಡಿಸಲು ಕೇಂದ್ರ ಜಲ ಆಯೋಗ ಯಾರು ಎಂದು ಕಟುವಾಗಿ ಪ್ರಶ್ನಿಸಿದರು.
ಈ ವಿಷಯವಾಗಿ ನಿಮ್ಮದೇ ಪಕ್ಷದ ಸರ್ಕಾರವಿರುವ ಕೇಂದ್ರದ ಗಮನಕ್ಕೆ ತಂದು ನಮಗಾದ ಅನ್ಯಾಯವನ್ನು ಸರಿಪಡಿಸಿಕೊಳ್ಳಿ. ಭದ್ರಾ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡಬೇಕೆಂಬುದು ಪುನಃ ನನೆಗುದಿಗೆ ಬಿದ್ದಿದೆ ಎಂಬುದು ನನ್ನ ಮಾಹಿತಿ. ಆದ್ದರಿಂದ ಕೂಡಲೇ ಕೇಂದ್ರದ ಮೇಲೆ ಪ್ರಭಾವ ಬೀರಿ ಇದರ ಅಧಿಸೂಚನೆಯನ್ನು ಜಾರಿ ಮಾಡಿಸಿ ಎಂದು ಸಿಎಂ ಬೊಮ್ಮಾಯಿ ಅವರನ್ನು ಆಗ್ರಹಿಸಿದರು.