ಬೆಳಗಾವಿ:ಅದು ಶಿಕ್ಷಣ ವಂಚಿತ ಕುಗ್ರಾಮವಾಗಿತ್ತು. ಆದರೆ ಆ ಸ್ವಾಮೀಜಿ ಅಂದು ತೆಗೆದುಕೊಂಡ ನಿರ್ಧಾರದಿಂದ ಈಗ ಇಡೀ ಗ್ರಾಮದ ಚಿತ್ರಣವೇ ಬದಲಾಗಿದೆ. ಶಿಕ್ಷಕರ ತವರೂರಾಗಿ ಮಾರ್ಪಟ್ಟಿದ್ದು, ರಾಜ್ಯದಲ್ಲೇ ಅತೀ ಹೆಚ್ಚು ಶಿಕ್ಷಕರನ್ನು ಹೊಂದಿರುವ ಹೆಗ್ಗಳಿಕೆಯನ್ನು ಈ ಗ್ರಾಮ ಪಡೆದುಕೊಂಡಿದೆ. ಶಿಕ್ಷಕರ ದಿನಾಚರಣೆ ನಿಮಿತ್ತ ಈ ವಿಶೇಷ ವರದಿ ನಿಮಗಾಗಿ.
ಹೌದು, ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ಇಂಚಿಂಚಿಗೂ ಶಿಕ್ಷಕರು ಸಿಗುತ್ತಾರೆ. ರಾಜ್ಯದ ವಿವಿಧೆಡೆ ಐನೂರಕ್ಕೂ ಹೆಚ್ಚು ಶಿಕ್ಷಕರು ಅಕ್ಷರ ಕಲಿಸುವ ಮೂಲಕ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. ಅಷ್ಟಕ್ಕೂ ಇಂಚಲ ಗ್ರಾಮ ಶಿಕ್ಷಕರ ತವರೂರಾಗಲು ಇಲ್ಲಿನ ಸಿದ್ಧಸಂಸ್ಥಾನ ಮಠದ ಡಾ. ಶಿವಾನಂದ ಭಾರತಿ ಸ್ವಾಮೀಜಿ ಅವರೇ ಕಾರಣ.
1969ರಲ್ಲಿ ಅಂದಿನ ಸಿದ್ದರಾಮ ಶಿವಯೋಗಿಗಳು ಶಿವಾನಂದ ಭಾರತಿ ಸ್ವಾಮೀಜಿ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಿದರು. ಪಟ್ಟಕ್ಕೆ ಏರಿದ ಮುಂದಿನ ವರ್ಷವೇ ಗ್ರಾಮದಲ್ಲಿ ವೇದಾಂತ ಪರಿಷತ್ ಆಯೋಜಿಸಿದ್ದರು. ತೀರಾ ಹಿಂದುಳಿದ ಗ್ರಾಮವನ್ನು ಸುಧಾರಣೆ ಮಾಡಬೇಕಾದರೆ ಏನು ಮಾಡಬೇಕೆಂದು ಯೋಚಿಸಿ ಇಲ್ಲಿನ ಜನರಿಗೆ ಶಿಕ್ಷಣ ನೀಡಬೇಕೆಂದು ನಿರ್ಧರಿಸಿದರು. ಅದರಂತೆ 1975ರಲ್ಲಿ ಶಿವಯೋಗೀಶ್ವರ ಪ್ರೌಢಶಾಲೆ, 1982ರಲ್ಲಿ ಪದವಿ ಪೂರ್ವ ಕಾಲೇಜು ಆರಂಭಿಸುವ ಮೂಲಕ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದರು.
ಬೆಂಗಳೂರಿನಲ್ಲೂ ಕೂಡ ಶ್ರೀಮಠದಿಂದ ಶಾಂತಾನಂದ ಪ್ರೌಢಶಾಲೆ ಆರಂಭಿಸಲಾಗಿದೆ. ಪಿಯುಸಿಯಲ್ಲಿ ಶಿಕ್ಷಣ ಶಾಸ್ತ್ರ ವಿಷಯ ತೆಗದುಕೊಂಡು ಪಿಯುಸಿ ಪೂರ್ಣಗೊಳಿಸಿದವರಿಗೆ ಶಿಕ್ಷಕರ ಮಧ್ಯಂತರ ತರಬೇತಿ ಪ್ರಾರಂಭಿಸಿ ಅದರ ಮೂಲಕ ಶಿಕ್ಷಕರ ಆಯ್ಕೆ ಪ್ರಾರಂಭವಾಯಿತು. ಬಳಿಕ 1983-84ರಲ್ಲಿ ಬೆಳಗಾವಿಯ ಕೆಎಲ್ಇ ಸಂಸ್ಥೆಯ ಟಿಸಿಎಚ್ ಕಾಲೇಜು ವತಿಯಿಂದ ಇಂಚಲದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಶಿಬಿರದಿಂದ ಪ್ರಭಾವಿತರಾದ ಡಾ. ಶಿವಾನಂದ ಭಾರತಿ ಸ್ವಾಮೀಜಿ 1986ರಲ್ಲಿ ಶ್ರೀಮಠದಿಂದ ಟಿಸಿಎಚ್ ಕಾಲೇಜು ಆರಂಭಿಸಿದರು. ಪ್ರಾರಂಭದಲ್ಲಿ ಉಚಿತ ಪ್ರವೇಶ ನೀಡಿದ್ದರಿಂದ ಹೆಚ್ಚು ವಿದ್ಯಾರ್ಥಿಗಳು ಟಿಸಿಎಚ್ ಅಭ್ಯಸಿಸಲು ಪ್ರೇರಣೆಯಾಯಿತು ಎಂಬುದು ಗ್ರಾಮಸ್ಥರ ಮಾತು.
ಒಂದೇ ವರ್ಷ 50 ಶಿಕ್ಷಕರು ಆಯ್ಕೆ: 1988ರಿಂದ ಪ್ರತಿ ಆಯ್ಕೆಯಲ್ಲೂ ಸರಾಸರಿ 20ಕ್ಕೂ ಹೆಚ್ಚು ಶಿಕ್ಷಕರು ಈ ಗ್ರಾಮದಿಂದ ಆಯ್ಕೆಯಾಗುತ್ತಾ ಬಂದಿದ್ದಾರೆ. ಇನ್ನು ಇಲ್ಲಿ ತರಬೇತಿ ಪಡೆದ 7 ಸಾವಿರ ಶಿಕ್ಷಕರ ಪೈಕಿ ಶೇ. 99ರಷ್ಟು ಶಿಕ್ಷಕರು ವಿವಿಧ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 1997ರ ಬ್ಯಾಚಿನಲ್ಲಿ ಕರಿಗಾರ ಮನೆತನದ ಏಳು ಶಿಕ್ಷಕರು ನೇಮಕಾತಿ ಆಗಿದ್ದರು. ಆ ವರ್ಷ ಇಂಚಲ ಗ್ರಾಮದ 50 ಜನ ಶಿಕ್ಷಕರಾಗಿ ನೇಮಕಾತಿ ಆಗಿದ್ದು ದಾಖಲೆಯೇ ಸರಿ. ಅಲ್ಲದೇ ಕರಿಗಾರ ಮನೆತನದಲ್ಲಿ ಒಟ್ಟು 15, ಗಾಣಗಿ, ರಾಯನಾಯ್ಕರ, ಮಿರ್ಜನ್ನವರ, ಬಡ್ಲಿ, ಜಂಬಗಿ ಸೇರಿ ಗ್ರಾಮದ ಇನ್ನಿತರ ಮನೆತನಗಳಲ್ಲಿ ಅತೀ ಹೆಚ್ಚು ಶಿಕ್ಷಕರಿದ್ದಾರೆ.