ಕರ್ನಾಟಕ

karnataka

ETV Bharat / state

ತಾತ್ಕಾಲಿಕ ರಾಜಕೀಯ ಕದನ ವಿರಾಮಕ್ಕೆ ಮುಕ್ತಿ.. ಸಾಹುಕಾರ್ ಮತ್ತು ಹೆಬ್ಬಾಳ್ಕರ್ ನಡುವೆ ಮಾತಿನ ಕಿಡಿ!!

ಕೆಲ ದಿನಗಳಿಂದ ಕುಂದಾನಗರಿಯಲ್ಲಿ ಕಾಣಿಸದೇ ಇದ್ದ ಪೊಲಿಟಿಕಲ್ ವಾಕ್ಸಮರ ಇವತ್ತು ಮತ್ತೆ ಮರುಕಳಿಸಿತು. ಬರೀ ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ಮೂಲಕ ಹೊತ್ತಿಕೊಂಡ ರಾಜಕೀಯ ಮಾತ್ಸರ್ಯದ ಮುಂದುವರೆದ ಭಾಗ ಇವತ್ತು ಹೀಗಿತ್ತು..

ಹೆಬ್ಬಾಳ್ಕರ್​​ ಫೈಟ್
ಹೆಬ್ಬಾಳ್ಕರ್​​ ಫೈಟ್

By

Published : Jun 15, 2020, 9:29 PM IST

Updated : Jun 15, 2020, 10:11 PM IST

ಬೆಳಗಾವಿ :ಒಂದು ಸರ್ಕಾರವನ್ನೇ ಉರುಳಿಸುವ ಮಟ್ಟಿಗೆ ಹೋಗಿದ್ದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸಚಿವ ರಮೇಶ್ ಜಾರಕಿಹೊಳಿ ನಡುವಿನ ಕದನಕ್ಕೆ ಇನ್ನೂ ವಿರಾಮ ಸಿಕ್ಕಿಲ್ಲ. ಇಬ್ಬರೊಳಗೂ ಇರುವ ಕಿಡಿ ಇನ್ನೂ ಆರಿಲ್ಲ. ಇವತ್ತು ಬೆಳಗಾವಿ ಗ್ರಾಮೀಣ ತಾಲೂಕಿನ ಪ್ರಗತಿ ಪರಿಶೀಲನಾ ಸಭೆಯೊಳಗೆ ಮತ್ತೆ ಇಬ್ಬರ ನಡುವೆಯೂ ರಾಜಕೀಯ ಕಿಡಿ ಕಾಣಿಸಿ ಮರೆಯಾಯ್ತು..

ಜಿಲ್ಲಾ ಉಸ್ತುವಾರಿಯಾದ ಬಳಿಕ ಸಚಿವ ರಮೇಶ್ ಜಾರಕಿಹೊಳಿ ಇಂದು ಮೊದಲ ಬಾರಿಗೆ ಜಿಪಂ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಕೇಂದ್ರ ಸಚಿವ ಸುರೇಶ್ ಅಂಗಡಿ ಸೇರಿ ಇಬ್ಬರು ಬಿಜೆಪಿ ಶಾಸಕರಿದ್ದ ಸಭೆಯಲ್ಲಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಹೆಬ್ಬಾಳ್ಕರ್ ಕೂಡ ಇದ್ದರು. ಈ ವೇಳೆ ತಾಲೂಕು ಪಂಚಾಯತ್‌ ಸದಸ್ಯರು ಶುದ್ಧ ಕುಡಿಯುವ ನೀರಿನ ಘಟಕಗಳು ಬಂದ್ ಆಗಿವೆ. ರಿಪೇರಿ ಮಾಡಿಸಿ ಎಂದು ಸಚಿವರಿಗೆ ತಿಳಿಸಿದರು.

ಆಗ ಕೇಂದ್ರ ಸಚಿವ ಸುರೇಶ್ ಅಂಗಡಿ ಮಧ್ಯೆ ಪ್ರವೇಶಿಸಿ, ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಪಬ್ಲಿಸಿಟಿಗೋಸ್ಕರ ಫೋಟೋ ಹಾಕಿ ಕುಡಿಯೋ ನೀರಿನ ಘಟಕಗಳನ್ನು ನಿರ್ಮಿಸಿದ್ದರು ಎಂದು ಟೀಕಿಸಿದರು. ಇದಕ್ಕೆ ಕಿಡಿಕಿಡಿಯಾದ ಶಾಸಕಿ ಹೆಬ್ಬಾಳ್ಕರ್, ಕೇಂದ್ರ ಸಚಿವ ಸುರೇಶ್ ಅಂಗಡಿ, ರಮೇಶ್ ಜಾರಕಿಹೊಳಿ ಸೇರಿ ಬಿಜೆಪಿ ನಾಯಕರನ್ನೇ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು.

ಇನ್ನೂ ಆರಿಲ್ಲ.. ಇಬ್ಬರೊಳಗಿನ ಕಿಡಿ ಇವತ್ತು ಮತ್ತೆ ಕಾಣಿಸಿತು..

ಉದ್ಯೋಗ ಕಳೆದುಕೊಂಡು ಸಾಕಷ್ಟು ಜನರು ನಿರುದ್ಯೋಗಿಗಳಾಗಿದ್ದಾರೆ. ಪೆಟ್ರೋಲ್ ಪಂಪ್ ಹಾಗೂ ಸಿಲಿಂಡರ್​ಗಳ ಮೇಲೆ ಮೋದಿ ಅವರ ಫೋಟೋ ಹಾಕಿಸಿದ್ದನ್ನು ಬಿಟ್ಟರೇ ಏನೂ ಸಾಧನೆ ಮಾಡಿಲ್ಲ. 20 ಲಕ್ಷ ಕೋಟಿ ಪ್ಯಾಕೇಜ್‌ ಘೋಷಣೆ ಮಾಡಿ ಪ್ರಚಾರ ತೆಗೆದುಕೊಂಡಿರೋದನ್ನ ಬಿಟ್ರೇ,, ಯಾರಾದರೂ ಒಬ್ಬ ರೈತನಿಗೆ ಇದರ ಪರಿಹಾರ ಸಿಕ್ಕಿದೆಯಾ ಹೇಳಿ ಎಂದು ಬಿಜೆಪಿ ನಾಯಕರಿಗೆ ಚಾಲೆಂಜ್ ಮಾಡಿದರು. ಆಗ ಸಭೆಯಲ್ಲಿದ್ದ ಜಾರಕಿಹೊಳಿ ಮೌನವಾಗಿದ್ದರು. ಶಾಸಕಿ ಪಕ್ಕ ಕುಳಿತಿದ್ದ ಸಚಿವ ಅಂಗಡಿ ಮುಜುಗರಕ್ಕೊಳಗಾದಂತೆ ಮುಖ ಮಾಡ್ಕೊಂಡಿದ್ದರು. ಶಾಸಕಿಯ ಈ ಮಾತಿನಿಂದ ಇಬ್ಬರೂ ಸಚಿವದ್ವಯರು ಕಕ್ಕಾಬಿಕ್ಕಿಯಂತಾಗಿದ್ದರು.

ಆದರೆ, ಹೆಬ್ಬಾಳ್ಕರ್ ಚಾಲೆಂಜ್ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಕೊಳಚೆಯಲ್ಲಿ ಕಲ್ಲು ಹೊಡೆದ್ರೆ ಏನಾಗುತ್ತೆ ಅಂತಾ ಮಹಿಳಾ ಶಾಸಕರ ಹೆಸರುಹೇಳದೇ ತಿರುಗೇಟು ಕೊಟ್ಟರು. ಅಷ್ಟೇ ಅಲ್ಲ, ಬರೋ ಗ್ರಾಮೀಣ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ವಿಶೇಷ ಗಮನ ನೀಡ್ತೇನೆ ಅಂತಾ ಹೇಳೋ ಮೂಲಕ ಶಾಸಕಿಯನ್ನ ಸೋಲಿಸುವ ಪ್ರತೀ ಸವಾಲನ್ನೂ ಎಸೆದರು.

ಮತ್ತೊಂದೆಡೆ ಸಚಿವರ ಕೊಳಚೆ ಎಂಬ ಹೇಳಿಕೆಗೆ ಬಗ್ಗೆ ಹೆಬ್ಬಾಳ್ಕರ್ ಯಾರು ಕೊಳಚೆ ಅಂತಾ ಪ್ರಶ್ನಿಸಿದರಲ್ಲದೇ ಆ ಬಗ್ಗೆ ಹೆಚ್ಚು ಪ್ರತಿಕ್ರಿಯಿಸಲ್ಲ ಅಂದರು. ನಾನು ಜವಾಬ್ದಾರಿಯುತ ಸ್ಥಾನದಲ್ಲಿದ್ದೇನೆ.. ಆದರೆ, ಗ್ರಾಮೀಣ ಕ್ಷೇತ್ರದ ಚುನಾವಣೆ ಕುರಿತ ಸವಾಲನ್ನ ಸ್ವೀಕರಿಸಿದ್ದೇನೆ ಅನ್ನೋ ಮಾತನ್ನ ಹೆಬ್ಬಾಳ್ಕರ್‌ ಖಡಕ್ ಆಗಿಯೇ ಹೇಳಿದರು. ಅಲ್ಲಿಗೆ ಇಬ್ಬರ ಮಧ್ಯೆ ನಡೆಯುತ್ತಿರುವ ರಾಜಕೀಯ ಸಮರ ಮತ್ತೊಂದು ಹಂತಕ್ಕೆ ತಲುಪೋದಂತೂ ಸುಳ್ಳಲ್ಲ.

Last Updated : Jun 15, 2020, 10:11 PM IST

ABOUT THE AUTHOR

...view details