ಬೆಳಗಾವಿ:ದಿ.ಸುರೇಶ್ ಅಂಗಡಿಯವರ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆ ಲೆಕ್ಕಾಚಾರಗಳು ಜೋರಾಗಿ ನಡೆಯುತ್ತಿವೆ.
ಬೆಳಗಾವಿ ಲೋಕಸಭಾ ಕ್ಷೇತ್ರ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆ ಲೆಕ್ಕಾಚಾರ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿಯಲ್ಲಿ ಜಾತಿ ಲೆಕ್ಕಾಚಾರದ ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವರ್ಚಸ್ಸು ಕಡಿಮೆ ಮಾಡುವ ತಂತ್ರಗಾರಿಕೆ ಮಾಡುತ್ತಿದೆ. ಹೌದು ಕಳೆದ ಲೋಕಸಭೆ ಚುನಾವಣೆಯಲ್ಲಿ ಕುರುಬ ಸಮುದಾಯದಿಂದ ಯಾವೊಬ್ಬ ನಾಯಕರಿಗೂ ಬಿಜೆಪಿ ಟಿಕೆಟ್ ನೀಡಿರಲಿಲ್ಲ. ಹೀಗಾಗಿ ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಟಿಕೆಟ್‍ನ್ನು ಕುರುಬ ಸಮುದಾಯಕ್ಕೆ ನೀಡಿ ಗೆಲ್ಲಿಸಿಕೊಂಡು ಬಂದು ಸಮುದಾಯದ ಪರವಾಗಿ ನಾವಿದ್ದೇವೆ ಎಂಬ ಸಂದೇಶ ರವಾನಿಸುವ ಲೆಕ್ಕಾಚಾರ ಬಿಜೆಪಿ ನಾಯಕರದ್ದಾಗಿದೆ. ಈ ನಿಟ್ಟಿನಲ್ಲಿ ಕುರುಬ ಸಮುದಾಯದ ನಾಯಕರಿಗೆ ಟಿಕೆಟ್ ನೀಡುವಂತೆ ಒಂದು ಟೀಮ್ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಿಎಂ ಯಡಿಯೂರಪ್ಪನವರನ್ನು ಭೇಟಿ ಆಗಿ ಮನವಿ ಮಾಡಿಕೊಂಡಿದ್ದಾರೆ.
ಇದೀಗ ಇದೇ ವಿಚಾರ ಹೈಕಮಾಂಡ್ ಮಟ್ಟದಲ್ಲಿ ಕೂಡ ಚರ್ಚೆಯಾಗುತ್ತಿದೆ. ರಾಜ್ಯದಲ್ಲಿ ಲೋಕಸಭಾ ಕ್ಷೇತ್ರದಲ್ಲಿ ಒಬ್ಬರಿಗೂ ಕುರುಬ ಸಮುದಾಯಕ್ಕೆ ಟಿಕೆಟ್ ನೀಡಿಲ್ಲ ಎಂಬ ಆಪಾದನೆಯಿಂದ ಬಿಜೆಪಿ ತಪ್ಪಿಸಿಕೊಳ್ಳಲು ಇದೊಂದು ಒಳ್ಳೆಯ ಅವಕಾಶ ಕೂಡ ಅಂತಿದ್ದಾರೆ ಕೆಲ ಹಿರಿಯ ಬಿಜೆಪಿ ನಾಯಕರು. ಬೆಳಗಾವಿ ಜಿಲ್ಲಾ ಕುರುಬ ಸಮುದಾಯದ ಮುಖಂಡರು ಬೆಳಗಾವಿ ಅತಿಥಿ ಗೃಹದಲ್ಲಿ ಶನಿವಾರ ಸಚಿವ ಈಶ್ವರಪ್ಪ ಅವರ ಜೊತೆಗೆ ಸಭೆ ನಡೆಸಿ ಕುರುಬ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ.
ಸಂಪುಟ ವಿಸ್ತರಣೆಗೆ ಕಾಯಲೇಬೇಕು: ಸಿಎಂ ಯಡಿಯೂರಪ್ಪ ಪುನರುಚ್ಛಾರ
ಸಮುದಾಯದಿಂದ ಮಾಜಿ ಸಂಸದ ಅಮರಸಿಂಹ ಪಾಟೀಲ್ ಮತ್ತು ವಸಂತ ದಳವಾಯಿ ಈಗಾಗಲೇ ಅರ್ಜಿ ಹಾಕಿದ್ದು ಈ ಕುರಿತು ಈಶ್ವರಪ್ಪ ಅವರ ಗಮನಕ್ಕೂ ತಂದಿದ್ದಾರೆ. ಇದಕ್ಕೆ ಸ್ಪಂದಿಸಿರುವ ಈಶ್ವರಪ್ಪ ವರಿಷ್ಠರ ಗಮನಕ್ಕೆ ತರುವುದಾಗಿ ಕುರುಬ ಸಮುದಾಯದವರಿಗೆ ಭರವಸೆ ನೀಡಿದ್ದಾರೆ.
ಈ ಕುರಿತು ಸಚಿವ ಕೆ.ಎಸ್ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು, ಕುರುಬ, ಒಕ್ಕಲಿಗರು, ಬ್ರಾಹ್ಮಣ ಸಮಾಜ ಅಂತ ಪ್ರಶ್ನೆಯಿಲ್ಲ ನಮ್ಮ ಪಕ್ಷದಲ್ಲಿ ಎಲ್ಲರೂ ಒಟ್ಟಾಗಿ ಕುಳಿತು ಚರ್ಚೆ ಮಾಡಿ ಯಾರು ಜನರ ಮಧ್ಯೆ ಇದ್ದು ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆಯೋ ಅವರಿಗೆ ಟಿಕೆಟ್ ನೀಡುತ್ತೇವೆ. ಆದ್ರೆ, ಮುಸ್ಲೀಮರಿಗೆ ಟಿಕೆಟ್ ನೀಡುವುದಿಲ್ಲ. ಬೆಳಗಾವಿ ಹಿಂದುತ್ವದ ಕೇಂದ್ರ, ಹಾಗಾಗಿ ಹಿಂದುತ್ವ ವಾದಿಗಳಿಗೆ ಟಿಕೆಟ್ ಕೊಡುತ್ತೇವೆ. ಸಿದ್ದರಾಮಯ್ಯಗೆ ಎಲ್ಲಿದೆ ವರ್ಚಸ್ಸು, ಕಾಂಗ್ರೆಸ್ಗೇ ವರ್ಚಸ್ ಇಲ್ಲ ಇನ್ನೂ ಸಿದ್ದರಾಮಯ್ಯಂದು ಎಲ್ಲಿದೆ ಅಂತಾ ಲೇವಡಿ ಮಾಡಿದರು.
ಒಟ್ಟಾರೆ ಬೆಳಗಾವಿ ಲೋಕಸಭಾ ಕ್ಷೇತ್ರದ ಬೈ ಎಲೆಕ್ಷನ್ ದಿನಾಂಕ ನಿಗದಿಯಾಗುವ ಮುನ್ನವೆ ಬಿಜೆಪಿ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಆದ್ರೇ ಇದೀಗ ಜಾತಿವಾರು ಲೆಕ್ಕಾಚಾರ ಬಿಜೆಪಿ ವಲಯದಲ್ಲಿ ನಡೆಯುತ್ತಿದ್ದು ಇದನ್ನು ಹಿಡಿದುಕೊಂಡು ಕೆಲ ಸಮುದಾಯವರು ತಮ್ಮ ಸಮುದಾಯಕ್ಕೆ ಟಿಕೆಟ್ ನೀಡಿ ಎಂದು ವರಿಷ್ಠರ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ ವರ್ಚಸ್ಸು ಕಡಿಮೆ ಮಾಡಲು ಪ್ಲಾನ್ ಮಾಡಿರುವ ಬಿಜೆಪಿ ಕೆಲ ನಾಯಕರ ಮಾತಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕುತ್ತಾ ಎಂಬುದನ್ನು ಕಾದು ನೋಡಬೇಕಿದೆ.