ಅಥಣಿ(ಬೆಳಗಾವಿ): ತಾಂತ್ರಿಕ ಅಡಚಣೆಗಳಿಂದ ಈವರೆಗೆ ತಳವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡಲು ಸಾಧ್ಯವಾಗಿಲ್ಲ. ಈಗಾಗಲೇ ಹಿಂದುಳಿದ ವರ್ಗಗಳ ಆಯೋಗವು ಸಮಾಜ ಕಲ್ಯಾಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಶೀಘ್ರದಲ್ಲೇ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು ಈ ಸಮುದಾಯಕ್ಕೆ ಪ್ರಮಾಣಪತ್ರ ನೀಡುವ ಮೂಲಕ ತಳವಾರರಿಗೆ ನ್ಯಾಯ ಒದಗಿಸುತ್ತೇವೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಳವಾರ ಸಮಾಜ ಬಾಂಧವರಿಗೆ ಸಿಹಿ ಸುದ್ದಿ ನೀಡಿದ್ರು.
ಶುಕ್ರವಾರದಂದು ಅಥಣಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ತಳವಾರ ಸಮುದಾಯವನ್ನು ಎಸ್ಟಿಗೆ ಸೇರ್ಪಡೆ ಕುರಿತು ಕೇಂದ್ರ ಸರ್ಕಾರದ ನಿರ್ದೇಶನವೂ ಇದೆ. ಆದರೆ ಆಡಳಿತಾತ್ಮಕ ಸಮಸ್ಯೆಗಳಿಂದ ಸ್ವಲ್ಪ ಹಿನ್ನೆಡೆಯಾಗಿದೆ. ಅಲ್ಲದೇ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಪರಿಷತ್ ಸದಸ್ಯರಾದ ರವಿಕುಮಾರ್ ಸೇರಿದಂತೆ ಎಲ್ಲ ನಾಯಕರ ಶ್ರಮದಿಂದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.