ಬೆಳಗಾವಿ: ಬೆಳಗಾವಿಯ ಉಪವಿಭಾಗಾಧಿಕಾರಿ ಕಚೇರಿಯ ತಹಶೀಲ್ದಾರ್ ಅಶೋಕ್ ಮಣ್ಣಿಕೇರಿ ಅವರು ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎನ್ನಲಾದ ಪ್ರಕರಣ ಮಗ್ಗಲು ಬದಲಿಸಿದೆ. ಇದು ಸಹಜ ಸಾವಲ್ಲ ಎಂದು ಅಶೋಕ್ ಅವರ ಸಹೋದರಿಯರು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಳಗಾವಿಯ ಕಾಳಿ ಅಂಬ್ರಾಯದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಅಶೋಕ್ ಮಣ್ಣಿಕೇರಿ ಕುಟುಂಬ ವಾಸವಿತ್ತು. ತಡರಾತ್ರಿ ಹೃದಯಾಘಾತವಾಗಿದೆ ಎಂದು ಖಾಸಗಿ ಆಸ್ಪತ್ರೆಗೆ ಅಶೋಕ್ ಅವರನ್ನು ಪತ್ನಿ ಮತ್ತು ಸಹೋದರ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆದರೆ ಅಷ್ಟರಲ್ಲೇ ಅಶೋಕ್ ಮಣ್ಣಿಕೇರಿ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಈ ಕುರಿತು ಅಶೋಕ್ ಅವರ ಸಹೋದರಿಯರು ಪೊಲೀಸರಿಗೆ ದೂರು ನೀಡಿದ್ದಾರೆ. ಅಶೋಕ್ ಮಣ್ಣಿಕೇರಿ ಪತ್ನಿ ಭೂಮಿ ಮತ್ತು ಅವರ ಸಹೋದರ ಸ್ಯಾಮ್ಯುಯೆಲ್ ಮೇಲೆ ದೂರಿನಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಅಶೋಕ್ ಸಾವಿನ ಬಗ್ಗೆ ತನಿಖೆಗೆ ಕುಟುಂಬಸ್ಥರು ಒತ್ತಾಯಿಸಿ ನಗರದ ಕ್ಯಾಂಪ್ ಠಾಣೆಗೆ ದೂರು ನೀಡಿದ್ದಾರೆ. ಠಾಣೆ ಎದುರು ಸ್ನೇಹಿತರು, ಸಂಬಂಧಿಕರು ಜಮಾವಣೆಗೊಂಡಿದ್ದರು. ಪೊಲೀಸ್ ಠಾಣೆಗೆ ಬಂದಿದ್ದ ಭೂಮಿ, ಸ್ಯಾಮ್ಯುಯೆಲ್ ಮೇಲೆ ಹಲ್ಲೆ ಯತ್ನ ನಡೆಯಿತು. ತಕ್ಷಣ ಮಧ್ಯಪ್ರವೇಶಿಸಿದ ಪೊಲೀಸರು ಇಬ್ಬರನ್ನೂ ರಕ್ಷಿಸಿ ಕರೆದೊಯ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಶೋಕ್ ಮಣ್ಣಿಕೇರಿ ಆಪ್ತ ಸಹಾಯಕರಾಗಿ ಕೆಲಸ ಮಾಡಿದ್ದರು.
ಇನ್ನು, ಪ್ರಕರಣದ ಕುರಿತು ಅಕ್ಕ ಗಿರಿಜಾ ಮಾತನಾಡಿ, "ತಮ್ಮನ ಸಾವಿನ ಬಗ್ಗೆ ತನಿಖೆ ಆಗಬೇಕು. ನಮಗೆ ನ್ಯಾಯ ಸಿಗಬೇಕು" ಎಂದು ಒತ್ತಾಯಿಸಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಂತಾಪ:ಅಶೋಕ್ ಮಣ್ಣಿಕೇರಿ ಸಾವಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ನನ್ನ ಆಪ್ತ ಸಹಾಯಕರಾಗಿದ್ದ ಅಶೋಕ ಮಣ್ಣಿಕೇರಿಯವರ ನಿಧನದ ಸುದ್ದಿ ಮನಸ್ಸಿಗೆ ತೀವ್ರ ನೋವನ್ನುಂಟು ಮಾಡಿದೆ. ಅಪಾರ ಜ್ಞಾನ, ಅನುಭವವುಳ್ಳ ವ್ಯಕ್ತಿಯನ್ನು ಕಳೆದುಕೊಂಡಿರುವುದು ದೊಡ್ಡ ನಷ್ಟವೆನಿಸುತ್ತಿದೆ. ಈ ಸಮಯದಲ್ಲಿ ಅವರ ಆತ್ಮಕ್ಕೆ ಶಾಂತಿ ಕೋರಿ, ಅವರ ಕುಟುಂಬಸ್ಥರಿಗೆ ಭಗವಂತ ನೋವು ಸಹಿಸುವ ಶಕ್ತಿಯನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇನೆ'' ಎಂದಿದ್ಧಾರೆ.