ಕರ್ನಾಟಕ

karnataka

ETV Bharat / state

ಚನ್ನಮ್ಮನ ಕಿತ್ತೂರು ಉತ್ಸವ, ರಾಷ್ಟ್ರೀಯ ಉತ್ಸವ ಆಗಲಿ: ಕೂಡಲಸಂಗಮ ಮತ್ತು ಕಲ್ಮಠ ಸ್ವಾಮೀಜಿಗಳ ಕರೆ - Kittoor Utsav held at belagavi

ಕಿತ್ತೂರು ಉತ್ಸವ ರಾಷ್ಟ್ರೀಯ ಉತ್ಸವವಾಗಬೇಕೆಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮತ್ತು ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ಒತ್ತಾಯಿಸಿದ್ದಾರೆ.

swamiji-urges-for-channammas-kittoor-utsav-to-be-a-national-festival
ಚನ್ನಮ್ಮನ ಕಿತ್ತೂರು ಉತ್ಸವ ರಾಷ್ಟ್ರೀಯ ಉತ್ಸವ ಆಗಲಿ: ಕೂಡಲಸಂಗಮ ಮತ್ತು ಕಲ್ಮಠ ಸ್ವಾಮೀಜಿ ಆಗ್ರಹ

By ETV Bharat Karnataka Team

Published : Oct 24, 2023, 7:33 AM IST

ಬೆಳಗಾವಿ :ಕಿತ್ತೂರು ರಾಣಿ‌ ಚನ್ನಮ್ಮಾಜಿ ಬ್ರಿಟಿಷರ ವಿರುದ್ಧ ಮೊದಲ ದಿಗ್ವಿಜಯ ಸಾಧಿಸಿದ್ದಕ್ಕೆ ಮುಂದಿನ ವರ್ಷ 200 ವರ್ಷ ತುಂಬಲಿದೆ. ಆ ವೇಳೆ, ಕಿತ್ತೂರು ಉತ್ಸವ ರಾಷ್ಟ್ರಮಟ್ಟದ ಉತ್ಸವ ಆಗಬೇಕು ಎಂದು ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮತ್ತು ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ಕಿತ್ತೂರು ಉತ್ಸವದಲ್ಲಿ ಆಗ್ರಹಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂದಿನ ವರ್ಷ ನಡೆಯಲಿರುವ ಕಿತ್ತೂರು ಉತ್ಸವ ರಾಷ್ಟ್ರೀಯ ಉತ್ಸವವಾಗಿ‌ ಘೋಷಿಸಬೇಕು. ಪಾರ್ಲಿಮೆಂಟ್ ಮುಂದೆ ಚನ್ನಮ್ಮ ಮತ್ತು ಬಸವಣ್ಣನವರ ಮೂರ್ತಿ ಇದೆ. ಆದರೆ, ಗೌರವ ಸಿಗ್ತಿಲ್ಲ. ಮುಂದಿನ ವರ್ಷ ಇಬ್ಬರು ಮಹಾನ್ ನಾಯಕರಿಗೆ ಪ್ರಧಾನಮಂತ್ರಿ ಮಾಲಾರ್ಪಣೆ ಮಾಡಿ ಗೌರವ ಕೊಡಬೇಕು. ಮುಖ್ಯಮಂತ್ರಿಗಳು ಬೇರೆ ಯಾವುದೇ ಉತ್ಸವ ತಪ್ಪಿಸಿದ್ರೂ ಪರವಾಗಿಲ್ಲ. ಕಿತ್ತೂರು ಉತ್ಸವಕ್ಕೆ ಬಂದು ಹೋಗುವ ಕೆಲಸವನ್ನ ಮಾಡಲಿ. ಮುಂದಿನ ವರ್ಷ ನಡೆಯುವ ಎರಡನೂರು ವರ್ಷದ ಉತ್ಸವಕ್ಕೆ ಈಗಿನಿಂದಲೇ ಸಭೆ ಕರೆದು ಚರ್ಚೆ ಮಾಡಲಿ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಗತವೈಭವ ಮರಳುವಂತೆ ಮಾಡಲು ಕ್ರಮ - ಸಚಿವರ ಭರವಸೆ:ಬಳಿಕ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ ಅವರು, ಕಳೆದ 25 ವರ್ಷಗಳಿಂದ ಉತ್ಸವ ಆಚರಿಸಲಾಗುತ್ತಿದೆ. ಬಂಗಾರಪ್ಪ ಅವರ ಕಾಲದಿಂದ ಸಣ್ಣದಾಗಿ ಆರಂಭವಾಗಿ ಇಂದು ರಾಜ್ಯದ ಮನೆ ಮಾತಾಗಿದೆ. ಐತಿಹಾಸಿಕ ಕಿತ್ತೂರು ಕೋಟೆ ಮತ್ತೆ ಗತವೈಭವದಿಂದ ಮೆರೆಯುವಂತೆ ಮಾಡಬೇಕು. ವಿವಿಧ ಇಲಾಖೆಯಿಂದ ಅನುದಾನ ತಂದು ಅಭಿವೃದ್ಧಿ ಪಡಿಸುತ್ತೇವೆ. ಲೋಕೋಪಯೋಗಿ ಇಲಾಖೆಯಿಂದ ಈ ವರ್ಷ 5 ಕೋಟಿ ಕಿತ್ತೂರಿನ ಅಭಿವೃದ್ಧಿಗೆ ನೀಡುತ್ತೇವೆ.‌ ಪ್ರತಿವರ್ಷವೂ 5 ಕೋಟಿ ರೂ ಸರ್ವಾಂಗೀಣ ಅಭಿವೃದ್ಧಿಗೆ ನೀಡುತ್ತೇವೆ. ನಂದಗಡ, ಅಮಟೂರ, ಹಲಸಿ, ಸಂಗೊಳ್ಳಿ ಒಂದು ಪ್ರವಾಸಿ ಸ್ಥಳ ಮಾಡ್ತೇವೆ. ಕಿತ್ತೂರು ರಾಜ್ಯಕ್ಕೆ ಅಲ್ಲಾ ದೇಶಕ್ಕೆ ಮಾದರಿ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ರಾಣಿ ಚನ್ನಮ್ಮನ ಇತಿಹಾಸವನ್ನು‌ ಮೂರು ದಿನಗಳಿಗೆ ಸೀಮಿತ ಮಾಡದೇ ವಿಚಾರ ಸಂಕಿರಣಗಳನ್ನು ಮಾಡಬೇಕು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ನೆನಪು ಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಸಾಂಸ್ಕೃತಿಕ ಗಟ್ಟಿ ನೆಲೆಯನ್ನ ನಿರ್ಮಿಸಿಬೇಕಿದೆ. ಬರುವ 200ನೇ ವರ್ಷಕ್ಕೆ ನಾಡ ಉತ್ಸವವಾಗದೇ ರಾಷ್ಟ್ರೀಯ ಉತ್ಸವಾಗಿ‌ ಪರಿವರ್ತನೆ ಆಗಬೇಕು. ಝಾನ್ಸಿ ರಾಣಿಗಿಂತ ಮೊದಲು ಕಿತ್ತೂರು ರಾಣಿ ಚನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿ ಗೆದ್ದಿದ್ದರು. ಕಿತ್ತೂರು ಉತ್ಸವ ರಾಷ್ಟ್ರೀಯ ಉತ್ಸವ ಮಾಡಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆಯಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ ಎಂದರು.

ರಾಷ್ಟ್ರೀಯ ಉತ್ಸವವಾಗಲಿ:ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಬಾಬಾಸಾಹೇಬ ಪಾಟೀಲ, ಚನ್ನಮ್ಮ ಉತ್ಸವ ನಮ್ಮ ಜಿಲ್ಲೆಗೆ ಸೀಮಿತವಾಗಿದೆ. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಉತ್ಸವ ಮಾಡಬೇಕು. ಕಿತ್ತೂರು ಅಭಿವೃದ್ಧಿಗೆ ಸಚಿವ ಸತೀಶ್ ಜಾರಕಿಹೊಳಿ ಅವರು ಐದು ಕೋಟಿ ಕೊಡ್ತೇವೆ ಅಂದಿದ್ದಾರೆ. ನಮಗೆ ಐದು ಕೋಟಿ ಬೇಡಾ ಹತ್ತು ಕೋಟಿ ರೂಪಾಯಿ ಅನುದಾನ ನೀಡಿ ಅಂತಾ ಮನವಿ ಮಾಡಿದ್ದೇನೆ. ಪ್ರತಿರೂಪದ ಕೋಟೆ ನಿರ್ಮಾಣ ಚಿಂತನೆ ಇದೆ.‌ಆದಷ್ಟು ಬೇಗ ಪ್ರತಿರೂಪದ ಕೋಟೆ ನಿರ್ಮಾಣ ಮಾಡ್ತೇವೆ ಎಂದರು.

ಅರಸರ ಸಮಾಧಿಗಳು ಸ್ಮಾರಕವಾಗಲಿ:ಕಿತ್ತೂರು ಕಲ್ಮಠದ ರಾಜಗುರು ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ಮಾತನಾಡಿ, ಕಿತ್ತೂರು ಉತ್ಸವ ರಾಷ್ಟ್ರಮಟ್ಟವಾಗಿ ಹೊರ ಹೊಮ್ಮಬೇಕು. ಆ ನಿಟ್ಟಿನಲ್ಲಿ ಇವತ್ತಿನಿಂದ ಕಾರ್ಯೋನ್ಮುಖರಾಗಬೇಕು. ಅದೇ ರೀತಿ ಅರಸರ ಸಮಾಧಿಗಳನ್ನ ರಾಷ್ಟ್ರಮಟ್ಟದ ಸ್ಮಾರಕ ಮಾಡಬೇಕು. ಕಿತ್ತೂರು ಅಭಿವೃದ್ಧಿ ಆಗಬೇಕು, 2024ಕ್ಕೆ ಕಿತ್ತೂರು ಕೋಟೆ ನಿರ್ಮಾಣ ಮಾಡಬೇಕು. ಕಿತ್ತೂರು ಪ್ರವಾಸಿ ತಾಣವಾಗಿ ಅಭಿವೃದ್ಧಿ ಆಗಿಲ್ಲ, ಅಭಿವೃದ್ಧಿ ಮಾಡಬೇಕು ಎಂದು ತಿಳಿಸಿದರು.

ರಾಣಿ ಚನ್ನಮ್ಮ ಜನಮಾನಸದಲ್ಲಿದ್ದಾರೆ;ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಮೈಸೂರು ಮಹಾರಾಜರದ್ದು ಸಾಧನೆ ದೊಡ್ಡದು. ಮೈಸೂರು ರಾಣಿಯರ ಹೆಸರು ಯಾರಿಗೂ ಗೊತ್ತಿಲ್ಲ. ಆದರೆ ರಾಣಿ ಚನ್ನಮ್ಮ ಎಲ್ಲರಿಗೂ ಗೊತ್ತು. ಪ್ರಾದೇಶಿಕ ಅಸಮಾನತೆಯೋ ಗೊತ್ತಿಲ್ಲ. ಆದ್ರೇ ಈ ಭಾಗ ಅಷ್ಟೊಂದು ಅಭಿವೃದ್ಧಿಯಾಗಿಲ್ಲ. ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ ಎಂದು ಹೇಳಿದರು.

ಸ್ವಾತಂತ್ರ ಸಂಗ್ರಾಮದ ಕಿಡಿ ಹೊತ್ತಿಸಿದ ಕಿತ್ತೂರು ರಾಷ್ಟ್ರೀಯ ಪ್ರಾಧಿಕಾರ ಆಗಬೇಕು. ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ಚನ್ನಮ್ಮ ಹೆಸರಿಡಬೇಕು. ಸ್ವಾತಂತ್ರ್ಯ ಸಂಗ್ರಾಮದ‌ ಮೊದಲ ಹುತಾತ್ಮ ಕಿತ್ತೂರಿನ ಸರ್ದಾರ್ ಗುರುಸಿದ್ದಪ್ಪ ಎಂದು ಬದಲಾವಣೆ ಆಗಬೇಕು. ಸರ್ಕಾರ ಈ ನಿಟ್ಟಿನಲ್ಲಿ ಅಧ್ಯಯನ ನಡೆಸಬೇಕೆಂದರು.

ಈ ಸಂದರ್ಭದಲ್ಲಿ ರಾಣಿ ಚನ್ನಮ್ಮಾಜಿ ವಂಶಜರಾದ ಮಲ್ಲಸರ್ಜ ಚಂದ್ರಶೇಖರ ದೇಸಾಯಿ ಅವರನ್ನು ಜಿಲ್ಲಾಡಳಿತದಿಂದ ಗೌರವಿಸಲಾಯಿತು. ಜೊತೆಗೆ ಡಾ. ಎಪಿಜೆ ಅಬ್ದುಲ್ ಕಲಾಂ ರಾಷ್ಟ್ರೀಯ ಪುರಸ್ಕಾರ ಪಡೆದ ಸರಸ್ವತಿ ಪೂಜಾರ ಅವರನ್ನು ಸನ್ಮಾನಿಸಲಾಯಿತು. ಶಾಸಕರಾದ ಮಹಾಂತೇಶ ಕೌಜಲಗಿ, ಆಸೀಫ್ ಸೇಠ್, ವಿಶ್ವಾಸ ವೈದ್ಯ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣಿದೇವಿ ಮಾಲಗತ್ತಿ‌
ಜಿಪಂ ಸಿಇಒ ಹರ್ಷಲ್ ಭೊಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಸೇರಿ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

ಇದನ್ನೂ ಓದಿ :ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್​ನಲ್ಲಿ ಸತೀಶ್​ಗೆ ಹಿಂಸೆ ಆಗುತ್ತಿದೆ: ರಮೇಶ್ ಜಾರಕಿಹೊಳಿ

ABOUT THE AUTHOR

...view details