ಬೆಳಗಾವಿ: ಬೈಲಹೊಂಗಲ ತಾಲೂಕಿನ ಹೊಸೂರು ಗ್ರಾಮದ ಸ್ವಾಮೀಜಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣದ ತನಿಖೆ ನಡೆಸಿದ ಸವದತ್ತಿ ತಾಲೂಕಿನ ಮುರಗೋಡ ಠಾಣೆಯ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
ಹಲ್ಲೆ ಬಗ್ಗೆ ಮಾಹಿತಿ ನೀಡಿದ ಸ್ವಾಮೀಜಿ ಮಲ್ಲಿಕಾರ್ಜುನ ಬುಡಶೆಟ್ಟಿ ಬಂಧಿತ ಆರೋಪಿ. ನಿನ್ನೆ ತಡರಾತ್ರಿ ಮಠಕ್ಕೆ ನುಗ್ಗಿದ್ದ ಈತ ಕಳ್ಳತನಕ್ಕೆ ಯತ್ನಿಸಿದ್ದ. ಇದಕ್ಕೆ ಹೊಸೂರಿನ ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ವಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ ಸ್ವಾಮೀಜಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಸವದತ್ತಿ ತಾಲೂಕಿನ ಮುರಗೋಡ ಠಾಣೆಯ ಪೊಲೀಸರು ತನಿಖೆ ನಡೆಸಿ ಆರೋಪಿ ಮಲ್ಲಿಕಾರ್ಜುನ ಬುಡಶೆಟ್ಟಿಯನ್ನು ಬಂಧಿಸಿದ್ದಾರೆ. ಈತನ ಮೇಲೆ ಹಲವು ಅಪರಾಧ ಪ್ರಕರಣಗಳಿದ್ದು, ಕೊಲೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಆರೋಪಿ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.
ಆರೋಪಿ ಮಲ್ಲಿಕಾರ್ಜುನ ವಿರುದ್ಧ ಐಪಿಸಿ ಸೆಕ್ಷನ್ 307ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಸ್ಥಳಕ್ಕೆ ಎಎಸ್‌ಪಿ ಅಮರನಾಥ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಕುರಿತು ಮಾಹಿತಿ ನೀಡಿದ ಸ್ವಾಮೀಜಿ:
ಘಟನೆಯಲ್ಲಿ ಹಲ್ಲೆಗೊಳಗಾಗಿರುವ ಶ್ರೀ ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಹಲ್ಲೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ನಿನ್ನೆ ತಡರಾತ್ರಿ ಯಾರೋ ಬಂದಿರುವ ಹಾಗೆ ಸಪ್ಪಳ ಆಯ್ತು. ಬಾಗಿಲು ತೆರೆದು ವಿಚಾರಿಸಲು ಪ್ರಯತ್ನಿಸಿದೆ. ಆದರೆ ಆತ ಏಕಾಏಕಿ ಕಬ್ಬು ಕಟಾವು ಮಾಡುವ ಮಚ್ಚಿನಿಂದ ಕಿವಿ, ತಲೆ ಹಾಗೂ ಕೈಗಳ ಮೇಲೆ ಹಲ್ಲೆ ಮಾಡಿದ. ಕೂಡಲೇ ಅಕ್ಕಪಕ್ಕದ ಜನರು ಬಂದಿದ್ದನ್ನು ಕಂಡು ಓಡಿ ಹೋದ ಎಂದು ತಿಳಿಸಿದ್ದಾರೆ.
ತೀವ್ರ ರಕ್ತಸ್ರಾವದಿಂದ ಬಿದ್ದಿದ್ದ ಸ್ವಾಮೀಜಿಯನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.