ಚಳಿಗಾಲದ ಅಧಿವೇಶನಕ್ಕೆ ಸಕಲ ಸಿದ್ಧತೆ ಕೈಗೊಂಡ ಜಿಲ್ಲಾಡಳಿತ: ನಾಯಕರ ಸ್ವಾಗತಕ್ಕೆ ಸಜ್ಜಾದ ಕುಂದಾನಗರಿ ಬೆಳಗಾವಿ: ಸೋಮವಾರದಿಂದ ಆರಂಭವಾಗಲಿರುವ ಹತ್ತು ದಿನಗಳ ಚಳಿಗಾಲ ಅಧಿವೇಶನಕ್ಕೆ ಸರ್ವ ರೀತಿಯಲ್ಲೂ ಬೆಳಗಾವಿ ಸಿದ್ಧಗೊಂಡಿದ್ದು, ಸರ್ಕಾರದ ಸ್ವಾಗತಕ್ಕೆ ಸಜ್ಜಾಗಿದೆ. ಆಡಳಿತ ಯಂತ್ರ ಹತ್ತು ದಿನ ಕುಂದಾನಗರಿಯಲ್ಲೇ ಠಿಕಾಣಿ ಹೂಡಲಿದೆ.
ಹೌದು ಬೆಳಗಾವಿ ನಗರದ ಪ್ರಮುಖ ರಸ್ತೆಗಳಲ್ಲಿನ ತೆಗ್ಗು ಗುಂಡಿಗಳನ್ನು ಮುಚ್ಚಿ ರಸ್ತೆ ವಿಭಜಕಗಳಿಗೆ ಬಣ್ಣ ಬಳಿಯಲಾಗಿದೆ. ಅಲ್ಲದೇ ಪ್ರಮುಖ ವೃತ್ತಗಳು ಝಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದು, ನಾಯಕರಿಗೆ ಸ್ವಾಗತ ಕೋರುವ ಬ್ಯಾನರ್ಗಳು ಎಲ್ಲೆಡೆ ರಾರಾಜಿಸುತ್ತಿವೆ.
ಅಧಿವೇಶನದಲ್ಲಿ ಭಾಗವಹಿಸಲು ಮುಖ್ಯಮಂತ್ರಿ, ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳು, ಪೊಲೀಸರು ಸೇರಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಬೆಳಗಾವಿಗೆ ಬರುತ್ತಿದ್ದಾರೆ. ಅವರಿಗೆಲ್ಲ ವಸತಿ, ಊಟೋಪಚಾರ, ಸಾರಿಗೆ ಇತರ ಸೌಲಭ್ಯಗಳನ್ನು ಕಲ್ಪಿಸಲು ಒಂದು ತಿಂಗಳಿನಿಂದ ಸುಮಾರು 950ಕ್ಕೂ ಅಧಿಕ ಸಿಬ್ಬಂದಿ, ಅಧಿಕಾರಿಗಳು ಅಧಿವೇಶನ ಸಿದ್ಧತೆಯಲ್ಲಿ ತೊಡಗಿದ್ದಾರೆ. ಇನ್ನು ಬೆಳಗಾವಿ ನಗರದಲ್ಲಿ 4 ಸಾವಿರ ಜನರಿಗೆ ವಸತಿ ಸೌಲಭ್ಯಕ್ಕಾಗಿ ಡಿಸೆಂಬರ್ 3 ರಿಂದಲೇ 75 ಲಾಡ್ಜ್‌ಗಳಲ್ಲಿ 2,500ಕ್ಕೂ ಹೆಚ್ಚು ಕೊಠಡಿ ಬುಕ್ ಮಾಡಲಾಗಿದೆ. ಅಲ್ಲದೇ ಬಹುತೇಕ ಎಲ್ಲ ಹೋಟೆಲ್, ಲಾಡ್ಜ್ ಗಳು ಬುಕ್ ಆಗಿವೆ.
ಈಗಾಗಲೇ ಸುವರ್ಣ ವಿಧಾನಸೌಧದಲ್ಲಿನ ಮುಖ್ಯಮಂತ್ರಿ, ಸಚಿವರು, ವಿವಿಧ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಕಚೇರಿಗಳ ಸ್ವಚ್ಛತೆ, ಹೊಸದಾಗಿ ಪೀಠೋಪಕರಣ ಅಳವಡಿಕೆ, ಕುಡಿಯುವ ನೀರು, ಶೌಚಗೃಹಗಳು, ದೀಪ, ಎಸಿ, ಪ್ಯಾನ್ ಸೇರಿ ಎಲ್ಲವನ್ನೂ ಅಧಿಕಾರಿಗಳ ತಂಡ ನಿತ್ಯ ಪರಿಶೀಲನೆ ನಡೆಸುತ್ತಿದೆ. ಮತ್ತೊಂದೆಡೆ ಸೌಧದ ಕಟ್ಟಡದ ಒಳ ಮತ್ತು ಹೊರ ಆವರಣದಲ್ಲಿ ಭದ್ರತೆಗಾಗಿ 400ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಸೌಧಕ್ಕೆ ಶಾಶ್ವತ ವಿದ್ಯುತ್ ದೀಪ ಅಳವಡಿಸಿದ್ದು, ಆವರಣದಲ್ಲಿ ಮೊಬೈಲ್ ಟಾವರ್, ಅಧಿಕಾರಿಗಳಿಗೆ ಊಟ, ಮಿನಿ ಬಸ್ ಸೇರಿ ಒಟ್ಟಾರೆ ಅಧಿವೇಶನದ ಯಶಸ್ಸಿಗೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಅಧಿವೇಶನ ಭದ್ರತೆಗಾಗಿ ಎಸ್‌ಪಿ-5, ಹೆಚ್ಚುವರಿ ಎಸ್ಪಿ-12, ಡಿವೈಎಸ್‌ಪಿ-42, ಪೊಲೀಸ್ ಇನಸ್ಪೆಕ್ಟರ್-100, ಪಿಎಸ್‌ಐ-200, 35 ಕೆಎಸ್‌ಆರ್‌ಪಿ ತುಕಡಿ, ಗುಪ್ತಚರ ಅಧಿಕಾರಿ, ಸಿಬ್ಬಂದಿ, ಶ್ವಾನದಳ, 3 ಸಾವಿರ ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು 5 ಸಾವಿರ ಸಿಬ್ಬಂದಿ ನಿಯೋಜಿಸಲಾಗಿದೆ. 2 ಸಾವಿರ ಪೊಲೀಸ್ ಸಿಬ್ಬಂದಿಗಳಿಗೆ ಅಲಾರವಾಡ ಗ್ರಾಮದ ಹೊರ ವಲಯದಲ್ಲಿ ಜರ್ಮನ್ ಟೆಂಟ್ನಲ್ಲಿ ವ್ಯವಸ್ಥೆ ಮಾಡಲಾಗಿದೆ.
ಮಚ್ಛೆ ಕೆಎಸ್‌ಆರ್‌ಪಿ ತರಬೇತಿ ಕೇಂದ್ರದಲ್ಲಿ 600, ಕಂಗ್ರಾಳಿ ತರಬೇತಿ ಕೇಂದ್ರದಲ್ಲಿ 300, ಸಾಂಬ್ರಾ ವಿಮಾನ ನಿಲ್ದಾಣದ ಬಳಿ 150, ಭೂತರಾಮನಹಟ್ಟಿ ಬಳಿಯ ಮುಕ್ತಿಮಠ, ಬೆಳಗಾವಿ ನಗರದ ವೀರಭದ್ರೇಶ್ವರ ದೇವಸ್ಥಾನ, ಶಹಪುರದಲ್ಲಿರುವ ದೇವಸ್ಥಾನ, ಖಾನಾಪೂರ ಪೊಲೀಸ್ ತರಬೇತಿ ಕೇಂದ್ರ ಸೇರಿದಂತೆ ಒಟ್ಟು 15 ಕಡೆಗಳಲ್ಲಿ ಪೊಲೀಸ್ ಸಿಬ್ಬಂದಿಗೆ ವಸತಿ, ಊಟ, ಸ್ನಾನಕ್ಕೆ ಬಿಸಿನೀರು ಸೇರಿ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ತಿಳಿಸಿದರು.
ಇದನ್ನೂ ಓದಿ:ದಲಿತ ಸಿಎಂಗೆ ಕಾಲ ಕೂಡಿ ಬಂದಿಲ್ಲ, ಕಾಲ ಕೂಡಿ ಬಂದಾಗ ಹೇಳುತ್ತೇನೆ: ಸತೀಶ್ ಜಾರಕಿಹೊಳಿ