ಮೀಸಲಾತಿ ನೀಡದಿದ್ದರೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು ಬೆಳಗಾವಿ :ಪಂಚಮಸಾಲಿ ಸಮಾಜದಿಂದ ಮೀಸಲಾತಿ ನೀಡುವಂತೆ ಒತ್ತಾಯಿಸಿ ನಾಳೆ ಬೆಳಗಾವಿ ನಗರ ಹೊರವಲಯದಲ್ಲಿ ಬೃಹತ್ ಹೋರಾಟದ ಸಭೆ ನಡೆಸಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಕುರಿತು ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುವರ್ಣಸೌಧದ ಎದುರು ಪಂಚಮಸಾಲಿ ಸಮಾಜದಿಂದ ಶಕ್ತಿ ಪ್ರದರ್ಶನ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ. ಹೋರಾಟಕ್ಕೆ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಪಂಚಮಸಾಲಿ ಸಮಾಜದ ಜನಸ್ತೋಮ ಸೇರಲಿದ್ದಾರೆ.
ಸಿಎಂ ನಮಗೆ ಮೀಸಲಾತಿ ಬಗ್ಗೆ ಹಲವು ಬಾರಿ ಭರವಸೆ ನೀಡಿದ್ದು, 19ಕ್ಕೆ ಸಿಹಿ ಸುದ್ದಿ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ನಾಳೆ ಮೀಸಲಾತಿ ನೀಡದಿದ್ದರೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ರವಾನಿಸಿದರು.
ಆ ಸಭೆಯಲ್ಲಿ ಸಿಎಂ ಸಿಹಿ ಸುದ್ದಿ ನೀಡಿದರೆ ಅವರಿಗೆ ಸನ್ಮಾನದೊಂದಿಗೆ ಇದೇ ವೇದಿಕೆಯಲ್ಲಿ ಅವರಿಗೆ ಕಲ್ಲು ಸಕ್ಕರೆಯಿಂದ ತುಲಾಭಾರ ಮಾಡಿ. ಬಿಜಾಪುರ ಪೇಟಾ, ಗೋಕಾಕ್ ಕರದಂಟು ನೀಡಿ ಗೌರವಿಸಲಾಗುವುದು. ಒಂದು ವೇಳೆ ಮೀಸಲಾತಿ ನೀಡದಿದ್ದರೆ ಪ್ರತಿಭಟನೆ ತೀವ್ರಗೊಳಿಸುವುದಾಗಿ ಹೇಳಿದರು.
ಪ್ರತಿಭಟನೆ ಸ್ಥಳ ಒಂದು ನೂರು ಎಕರೆ ಪ್ರದೇಶದಲ್ಲಿ ಸ್ಥಳ ನಿಗದಿಪಡಿಸಲಾಗಿದೆ. ಯಾವುದೇ ಸ್ಥಳದ ತೊಂದರೆ ಇಲ್ಲಾ ರಾಜ್ಯದ ಮೂಲೆ ಮೂಲೆಗಳಿಂದ ಸಮಾಜದ ಬಾಂಧವರು ಬರುತ್ತಾರೆ ಹೋರಾಟಕ್ಕೆ ಬರುವಾಗ ಹಾಸಿಗೆ ತೆಗೆದುಕೊಂಡು ಬರುವಂತೆ ಸಮಾಜ ಬಾಂಧವರಿಗೆ ಶ್ರೀಗಳು ಕರೆ ನೀಡಿದ್ದು, ಪ್ರತಿಭಟನೆಗೆ ಯಾವುದೇ ತೊಂದರೆ ನೀಡದಂತೆ ಸರ್ಕಾರಕ್ಕೆ ಶ್ರೀಗಳು ಮನವಿ ಸಲ್ಲಿಸಿದರು.
ಇದನ್ನೂ ಓದಿ :'2ಎ ಮೀಸಲಾತಿ ನೀಡಿದ್ರೆ ವಿಜಯೋತ್ಸವ, ಇಲ್ಲದಿದ್ದರೆ ಡಿ.22ಕ್ಕೆ ವಿಧಾನಸೌಧಕ್ಕೆ ಮುತ್ತಿಗೆ'