ಕರ್ನಾಟಕ

karnataka

ETV Bharat / state

ಶ್ರಮಜೀವನದ ಸಾರ್ಥಕತೆ.. ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ.. ಸಿಹಿ ಕಬ್ಬಿನ ಹಿಂದೆ ಕಹಿ ಬದುಕು.. - Wage workers

ಗಂಡಸರು ದಿನವಿಡೀ ಕಬ್ಬು ಕಟಾವು ಮಾಡಿದ್ರೆ, ಅವರ ಜೊತೆಗಿದ್ದ ಹೆಣ್ಣು ಮಕ್ಕಳು ಬೆಳಗಿನ ಜಾವ ಬೇಗನೆ ಎದ್ದು ಅಡುಗೆ ಮಾಡಿ ಡಬ್ಬಿ ತುಂಬಿಕೊಂಡು ಹಸುಗೂಸುಗಳನ್ನು ಬಗಲಿಗೆ ಕಟ್ಟಿಕೊಂಡು ಗದ್ದೆಗಳಿಗೆ ತೆರಳಿ ತಮ್ಮ ಪತಿಗೆ ಸಹಾಯ ಮಾಡುತ್ತಾರೆ..

mercenaries
ಕೂಲಿಕಾರರು

By

Published : Jan 25, 2021, 8:00 PM IST

Updated : Jan 25, 2021, 10:00 PM IST

ಚಿಕ್ಕೋಡಿ :ಮಂಡ್ಯ ಹೊರತು ಪಡಿಸಿದ್ರೆ ಅತಿ ಹೆಚ್ಚು ಕಬ್ಬು ಬೆಳೆಯೋ ಜಿಲ್ಲೆ ಬೆಳಗಾವಿ. ಬೆಳೆದ ಕಬ್ಬನ್ನು ಕಟಾವು‌ ಮಾಡಬೇಕಂದ್ರೆ ಕೂಲಿ ಕಾರ್ಮಿಕರು ಬೇಕೆ ಬೇಕು. ನಮ್ಮ ರಾಜ್ಯವಲ್ಲದೇ ಹೊರ ರಾಜ್ಯಗಳಿಂದಲೂ ಕೂಡ ಕಬ್ಬು ಕಟಾವು ಮಾಡಲು ಕೂಲಿಕಾರರ ಕುಟುಂಬಗಳು ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗಕ್ಕೆ ವಲಸೆ ಬರುತ್ತವೆ. ಸುಮಾರು ಮೂನ್ನಾಲ್ಕು ತಿಂಗಳ ಕಾಲ ಬೆಳಗ್ಗೆಯಿಂದ ಸಂಜೆವರೆಗೆ ಕೂಲಿ ಮಾಡಿ ಮತ್ತೆ ತಮ್ಮ ಊರುಗಳತ್ತ ಮುಖ ಮಾಡುತ್ತಾರೆ.

ಚಿಕ್ಕೋಡಿ ಉಪವಿಭಾಗದ ಕಾಗವಾಡ, ಅಥಣಿ, ರಾಯಬಾಗ, ನಿಪ್ಪಾಣಿ ಸೇರಿ ವಿವಿಧ ತಾಲೂಕುಗಳಲ್ಲಿ ಕುಟುಂಬ ಸಮೇತ ಕಬ್ಬು ಕಟಾವು ಮಾಡಲು ಹೀಗೆ ವಲಸೆ ಕಾರ್ಮಿಕರು ಬರುವುದು ವಿಶೇಷ. ಈ ಕೂಲಿಕಾರರೆಂಬ ಕಷ್ಟಜೀವಿಗಳ ಬೀದಿ ಬದಿಯ ಬದುಕನ್ನು ನೋಡಿದ್ರೆ ಎಂಥವರಿಗೂ ಕನಿಕರ ಬರದೇ ಇರದು.

ದಸರಾ ಹಬ್ಬ ಮುಗಿಯುತ್ತಿದ್ದಂತೆ ಗುತ್ತಿಗೆದಾರರ ಲಾರಿಯಲ್ಲಿ ಗಂಟು-ಮೂಟೆ ಕಟ್ಟಿಕೊಂಡು ತಮ್ಮೂರನ್ನು ತ್ಯಜಿಸಿ ನೂರಾರು ಕಿ.ಮೀ. ದೂರದ ಕರ್ನಾಟಕ ಗಡಿಗೆ ಬರುತ್ತಾರೆ. ಇಲ್ಲಿನ ಸಕ್ಕರೆ ಕಾರ್ಖಾನೆಗಳ ಆವರಣ ಇಲ್ಲವೇ, ಅಲ್ಲಲ್ಲಿ ರಸ್ತೆಗಳ ಬದಿಯ ಬಯಲಿನಲ್ಲಿ ಗುಡಿಸಲುಗಳನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಾರೆ.

ಹಸುಗೂಸುಗಳನ್ನು ಬಗಲಿಗೆ ಕಟ್ಟಿಕೊಂಡು ಬರುವ ಕೂಲಿಕಾರ ಮಹಿಳೆಯರು, ಇನ್ನುಳಿದ ತಮ್ಮ ಮಕ್ಕಳನ್ನು ತಮ್ಮೂರಲ್ಲೇ ವೃದ್ಧ ಅತ್ತೆ, ಮಾವ,ಅಜ್ಜ, ಅಜ್ಜಿಯ ಬಳಿ ಬಿಟ್ಟು ಬಂದಿರುತ್ತಾರೆ. ಸಕ್ಕರೆ ಕಾರ್ಖಾನೆಗಳ ಕಬ್ಬು ಕಟಾವು ಹಂಗಾಮು ಪ್ರಾರಂಭದಿಂದ ಚಕ್ರ ನಿಲ್ಲುವವರೆಗೆ ಕೆಲಸ ಮಾಡ್ತಾರೆ.

ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ.. ಸಿಹಿ ಕಬ್ಬಿನ ಹಿಂದೆ ಕಹಿ ಬದುಕು

ಗಂಡಸರು ದಿನವಿಡೀ ಕಬ್ಬು ಕಟಾವು ಮಾಡಿದ್ರೆ, ಅವರ ಜೊತೆಗಿದ್ದ ಹೆಣ್ಣು ಮಕ್ಕಳು ಬೆಳಗಿನ ಜಾವ ಬೇಗನೆ ಎದ್ದು ಅಡುಗೆ ಮಾಡಿ ಡಬ್ಬಿ ತುಂಬಿಕೊಂಡು ಹಸುಗೂಸುಗಳನ್ನು ಬಗಲಿಗೆ ಕಟ್ಟಿಕೊಂಡು ಗದ್ದೆಗಳಿಗೆ ತೆರಳಿ ತಮ್ಮ ಪತಿಗೆ ಸಹಾಯ ಮಾಡುತ್ತಾರೆ.

ಕಬ್ಬು ಕಟಾವು ಗುತ್ತಿಗೆದಾರರು ಜೂನ್‌ ತಿಂಗಳಲ್ಲಿಯೇ ಕಾರ್ಖಾನೆಗಳಿಂದ ತಮ್ಮ ಗುಂಪಿನಲ್ಲಿ ಪ್ರತಿಯೊಬ್ಬರ ಕಬ್ಬು ಕಟಾವುದಾರರ ಹೆಸರಿನಲ್ಲಿ 70 ಸಾವಿರದಿಂದ 1 ಲಕ್ಷ ರೂ.ವರೆಗೆ ಮುಂಗಡ ಹಣ ಪಡೆದು ಅವರಿಗೆ ಮುಟ್ಟಿಸಿ ಕಬ್ಬು ಕಟಾವು ವೇಳೆಗೆ ಮುಂಗಡ ಹಣ ಮುರಿದುಕೊಳ್ಳುತ್ತಾರೆ.

ದಸರಾ ಮುಗಿಯುತ್ತಿದ್ದಂತೆ ಇವರು ತಮ್ಮ ಗಂಟುಮೂಟೆ ಕಟ್ಟಿಕೊಂಡು ಕುಟುಂಬ ಸಮೇತ ಕಬ್ಬು ಕಟಾವಿಗಾಗಿ ತಾವು ಮುಂಗಡ ಪಡೆದ ಕಾರ್ಖಾನೆಗಳತ್ತ ಆಗಮಿಸುತ್ತಾರೆ. ಮೂರ್ನಾಲ್ಕು ತಿಂಗಳು ತಮ್ಮ ಮನೆಯವರನ್ನು, ಮಕ್ಕಳನ್ನು ಬಿಟ್ಟು ಎಲ್ಲೋ ಬಂದು ಒಂದು ನೆಲೆ ಮಾಡಿ ನಂತರ ಅದನ್ನು ಬಿಟ್ಟು ಹೊರಡುತ್ತಾರೆ. ಹಸಿದ ಹೊಟ್ಟೆ ಇಂಥ ಶ್ರಮಜೀವನಕ್ಕೆ ಇವರನ್ನ ಒಗ್ಗಿಕೊಳ್ಳುವಂತೆ ಮಾಡುತ್ತೆ..

Last Updated : Jan 25, 2021, 10:00 PM IST

ABOUT THE AUTHOR

...view details