ಬೆಳಗಾವಿ: ರಾಜ್ಯ ಕಂಡ ಸಜ್ಜನ ರಾಜಕಾರಣಿ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ವಿಧಿವಶರಾಗಿದ್ದಾರೆ. ಆದರೆ ಈ ಭಾಗದ ಜನರ ದಶಕಗಳ ಬೇಡಿಕೆಯನ್ನು ಸಾಕಾರಗೊಳಿಸಿ ಯೋಜನೆ ಜಾರಿಗೆ ಮೊದಲೇ ಸುರೇಶ್ ಅಂಗಡಿ ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಉತ್ತರ ಕರ್ನಾಟಕ ಭಾಗದ ಪ್ರಮುಖ ನಗರಗಳಾದ ಹುಬ್ಬಳ್ಳಿ-ಧಾರವಾಡ-ಬೆಳಗಾವಿಯನ್ನು ತ್ರಿವಳಿ ನಗರವನ್ನಾಗಿಸಲು ಪೂರಕವಾದ ರೈಲ್ವೆ ಯೋಜನೆಗ ಕೇಂದ್ರದ ಒಪ್ಪಿಗೆ ಕೊಡಿಸುವ ಮೂಲಕ ಈ ಭಾಗದ ಜನರು ಕಂಡ ಕನಸನ್ನು ಸುರೇಶ್ ಅಂಗಡಿ ಸಾಕಾರಗೊಳಿಸಿ ಹೋಗಿದ್ದಾರೆ. ಬೆಳಗಾವಿ-ಧಾರವಾಡ-ಹುಬ್ಬಳ್ಳಿಯನ್ನು ತ್ರಿವಳಿ ನಗರವಾಗಿಸಲು ಪ್ರಮುಖ ರೈಲ್ವೆ ಯೋಜನೆಯಾದ ಬೆಳಗಾವಿ-ಧಾರವಾಡ ರೈಲ್ವೆ ಯೋಜನೆ ಜಾರಿಗೆಗೆ ಪಣ ತೊಟ್ಟಿದ್ದ ಸುರೇಶ್ ಅಂಗಡಿ ಕೇಂದ್ರದಿಂದಲೂ ಅನುಮೋದನೆ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಬೆಳಗಾವಿಯಿಂದ ಕಿತ್ತೂರು ಮಾರ್ಗವಾಗಿ ಧಾರವಾಡಕ್ಕೆ ತಲುಪುವ 73 ಕಿ.ಮೀ. ರೈಲು ಮಾರ್ಗ ನಿರ್ಮಾಣ ಯೋಜನೆಯ ಯೋಜನಾ ವರದಿಗೆ ಕೆಲ ದಿನಗಳ ಹಿಂದೆಯೇ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. 927.40 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, ಸುರೇಶ್ ಅಂಗಡಿ ಅವರ ಹೆಚ್ಚಿನ ಆಸಕ್ತಿಯಿಂದ ಯೋಜನೆ ಮಂಜೂರಾಗಿತ್ತು. ಸಂಸತ್ ಅಧಿವೇಶನದ ಬಳಿಕ ಈ ಸಂಬಂಧ ಬೆಂಗಳೂರಿನಲ್ಲಿ ಸುರೇಶ್ ಅಂಗಡಿ ಸಭೆ ನಡೆಸಲಿದ್ದರು. ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಲು ಅಂಗಡಿ ನಿರ್ಧರಿಸಿದ್ದರು.
ಉತ್ತರ ಕರ್ನಾಟಕ ಭಾಗದ ದಶಕದ ಕನಸು ನನಸಾಗುವ ಮುನ್ನವೇ ಸುರೇಶ್ ಅಂಗಡಿ ವಿಧಿವಶರಾಗಿದ್ದು, ಈ ಭಾಗದ ಜನರ ನೋವಿಗೆ ಕಾರಣವಾಗಿದೆ. ಬೆಳಗಾವಿ - ಧಾರವಾಡ ಮಧ್ಯೆ ಒಟ್ಟು 11 ನಿಲ್ದಾಣಗಳು ಬರಲಿದ್ದ ಈ ಯೋಜನೆ ಬೆಳಗಾವಿ, ದೇಸೂರ, ಕಣವಿಕರವಿನಕೊಪ್ಪ, ಬಾಗೇವಾಡಿ, ಎಂ.ಕೆ.ಹುಬ್ಬಳ್ಳಿ, ಹುಲಿಕಟ್ಟಿ, ಕಿತ್ತೂರು, ತೇಗೂರು, ಮಮ್ಮಿಗಟ್ಟಿ, ಕ್ಯಾರಕೊಪ್ಪ, ಧಾರವಾಡ ಮಾರ್ಗ ಇತ್ತು. ಹೊಸ ಮಾರ್ಗಕ್ಕೆ ಅಗತ್ಯವಿರುವ ಭೂಮಿಯನ್ನು ಉಚಿತವಾಗಿ ನೀಡಲು ಈಗಾಗಲೇ ರಾಜ್ಯ ಸರ್ಕಾರ ಒಪ್ಪಿಗೆ ನೀಡಿತ್ತು.
ಈ ಮೊದಲು ಬೆಳಗಾವಿಯಿಂದ ಧಾರವಾಡಕ್ಕೆ ಹೋಗಲು ಎರಡೂವರೆಯಿಂದ ಮೂರು ಗಂಟೆ ಸಮಯ ಹಿಡಿಯುತ್ತಿತ್ತು. ನೂತನ ಮಾರ್ಗದಿಂದ ಕೇವಲ 1 ಗಂಟೆಯಲ್ಲಿ ಬೆಳಗಾವಿಯಿಂದ ಧಾರವಾಡ ತಲುಪಬಹುದಾಗಿದೆ. ಯೋಜನೆ ಜಾರಿಗೆ ಮೊದಲೇ ಸುರೇಶ್ ಅಂಗಡಿ ವಿಧಿವಶರಾಗಿದ್ದಾರೆ.