ಬೆಳಗಾವಿ:ಜಾರಿ ನಿರ್ದೇಶನಾಲಯ, ಐಟಿ ಸೇರಿದಂತೆ ಎಲ್ಲಾ ಇಲಾಖೆಗಳು ಕಾನೂನಿನ ಚೌಕಟ್ಟಿನಲ್ಲೇ ಕಾರ್ಯನಿರ್ವಹಿಸುತ್ತಿವೆ. ಇಡಿ ಅಧಿಕಾರಿಗಳಿಗೆ ಸಮರ್ಪಕ ಉತ್ತರ ನೀಡಿದರೆ ಮಾತ್ರ ಹೊರಬರಲು ಸಾಧ್ಯ ಎಂದು ಕೇಂದ್ರ ಸಚಿವ ಸುರೇಶ ಅಂಗಡಿ ಅವರು ಮಾಜಿ ಸಚಿವ ಡಿಕೆಶಿಗೆಯವರಿಗೆ ಪರೋಕ್ಷವಾಗಿ ಸಲಹೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಾಜಪೇಯಿ ಸರ್ಕಾರದ ಅವಧಿಯಲ್ಲಿ ನನ್ನ ಮನೆ ಮೇಲೂ ಐಟಿ ದಾಳಿ ಆಗಿತ್ತು. ಕಳೆದ ನಮ್ಮ ಸರ್ಕಾರದ ಅವಧಿಯಲ್ಲಿ ಸಂಸದ ಸಿದ್ದೇಶ್ವರ ಮನೆ ಮೇಲೂ ದಾಳಿ ಆಗಿತ್ತು. ಐಟಿ ಇಲಾಖೆ ಯಾವುದೇ ಪಕ್ಷ, ಮುಖಂಡರನ್ನು ನೋಡಿ ದಾಳಿ ಮಾಡಲ್ಲ. ಹಣಕಾಸಿನ ವ್ಯವಹಾರದಲ್ಲಿ ಡೌಟ್ ಬಂದಾಗ ಮಾತ್ರ ಐಟಿ ದಾಳಿ ಮಾಡುತ್ತದೆ. ಇಡಿಗೆ ಸಮರ್ಪಕ ಮಾಹಿತಿ ನೀಡಬೇಕು. ಅಂದಾಗ ಮಾತ್ರ ಹೊರಬರಲು ಸಾಧ್ಯ. ಇಲ್ಲವಾದ್ರೆ ಕಷ್ಟ ಎಂದರು.
ಕೇಂದ್ರ ಸಚಿವ ಸುರೇಶ ಅಂಗಡಿ ಸುದ್ದಿಗೋಷ್ಠಿ.. ಇಡಿ, ಐಟಿ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಡಿಕೆಶಿ ಬಂಧನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಾರ್ವಜನಿಕ ಆಸ್ತಿ ಹಾಳು ಮಾಡುವುದನ್ನು ನಿಲ್ಲಿಸಬೇಕು. ಸಾರ್ವಜನಿಕ ಆಸ್ತಿ ಹಾಳು ಮಾಡುವುದೇ ಕಾಂಗ್ರೆಸ್ ಸಂಸ್ಕೃತಿ. ಸದ್ಯದ ಕಾಂಗ್ರೆಸ್ ಇಟಾಲಿಯನ್ ಮೂಲದವರ ಹಿಡಿತದಲ್ಲಿದೆ. ಹೀಗಾಗಿ ದೇಶದಲ್ಲಿ ಮತ್ತೊಂದು ಈಷ್ಟ್ ಇಂಡಿಯಾ ವ್ಯವಸ್ಥೆ ಮಾಡಲು ಕಾಂಗ್ರೆಸ್ ಹೊರಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶದ ವಿರುದ್ಧವಿದ್ದ ಕಾನೂನನ್ನು ಬಿಜೆಪಿ ರದ್ದು ಮಾಡುತ್ತಿದೆ. ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ರದ್ದು ಮಾಡಿ, ಭಾರತೀಯ ಅವಿಭಾಜ್ಯ ಅಂಗವಾಗಿಸಿದೆ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ದೇಶದ ಹಿತಾಸಕ್ತಿಗೆ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ಮಾತ್ರ ತನ್ನ ಸಂಸ್ಕೃತಿ ಬದಲಿಸಿಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.