ಕರ್ನಾಟಕ

karnataka

ETV Bharat / state

ರೈತಾಪಿ ಕುಟುಂಬದಿಂದ ಕೇಂದ್ರ ಸಚಿವಗಿರಿವರೆಗೆ.. ಹೀಗಿದೆ ಸುರೇಶ್​ ಅಂಗಡಿ ರಾಜಕೀಯ ಜರ್ನಿ

ಉದ್ಯಮದ ಜೊತೆಗೆ 1996ರಲ್ಲಿ ಬಿಜೆಪಿ ಸದಸ್ಯರಾಗಿ ತಮ್ಮ ಸಾಮರ್ಥ್ಯ, ಸಂಘಟನೆ ಮನೋಭಾವದಿಂದ ಬಿಜೆಪಿ ಉಪಾಧ್ಯಕ್ಷರಾಗಿದ್ದರು. 2001ರಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿದ್ದರು. 2004ರಿಂದ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡು ಗೆಲುವನ್ನು ತಮ್ಮದಾಗಿಸಿಕೊಳ್ಳುತ್ತಾ ಬಂದಿದ್ದರು..

Suresh Angadi
ಸುರೇಶ್​ ಅಂಗಡಿ

By

Published : Sep 23, 2020, 10:34 PM IST

ಬೆಳಗಾವಿ :ಕೇಂದ್ರ ಸಚಿವ ಸುರೇಶ್​ ಅಂಗಡಿರಾಜ್ಯ ಹಾಗೂ ಜಿಲ್ಲಾ ರಾಜಕಾರಣದಲ್ಲಿ ಸಜ್ಜನಿಕೆಯ ಸ್ವಭಾವದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದವರು. ಆದರೆ, ಈಗ ಅವರು ವಿಧಿವಶರಾಗಿರೋದು ಜಿಲ್ಲೆಗಷ್ಟೇ ಅಲ್ಲ, ರಾಜ್ಯಕ್ಕೆ ತುಂಬಲಾರದ ನಷ್ಟ. ರೈತಾಪಿ ಕುಟುಂಬದ ಹಿನ್ನೆಲೆಯಿದ್ದ ಅವರು ರೈಲ್ವೆ ಇಲಾಖೆ ರಾಜ್ಯ ಸಚಿವರಾಗುವವರೆಗಿನ ಅವರ ರಾಜಕೀಯ ಜೀವನದ ಕುರಿತಾದ ಮಾಹಿತಿ ಇಲ್ಲಿದೆ.

1955 ಜೂನ್ 1 ರಂದು ಸೋಮವ್ವ ಚನ್ನಬಸಪ್ಪ ದಂಪತಿಯ ದ್ವಿತೀಯ ಸುಪುತ್ರರಾಗಿ ಸುರೇಶ್ ಅಂಗಡಿ ಅವರು ರೈತಾಪಿ ಕುಟುಂಬದಲ್ಲಿ ಜನಿಸಿದ್ದರು. ಬೆಳಗಾವಿ ತಾಲೂಕಿನ ಕೆಕೆ ಕೊಪ್ಪ ಗ್ರಾಮದವರು. ಪ್ರಸ್ತುತ ಬೆಳಗಾವಿಯ ವಿಶ್ವೇಶ್ವರ ನಗರದಲ್ಲಿ ವಾಸವಿದ್ದರು.

ಬೆಳಗಾವಿಯ ಎಸ್‍ಎಸ್‍ಎಸ್ ಸಮಿತಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದಿದ್ದ ಸುರೇಶ ಅಂಗಡಿ ಅವರು ಬಳಿಕ ಬೆಳಗಾವಿಯ ಆರ್‌ ಎನ್ ಲಾ ಕಾಲೇಜಿನಲ್ಲಿ ಕಾನೂನು ವಿಭಾಗದಲ್ಲಿ ಪದವಿ ಪೂರೈಸಿದ್ದರು. ನಂತರ ವಾಸವದತ್ತ ಸಿಮೆಂಟ್ ಡೀಲರ್ ಗಿಟ್ಟಿಸಿಕೊಂಡ ಅವರು ಬೆಳಗಾವಿಯಲ್ಲಿ ಸಿಮೆಂಟ್ ಉದ್ಯಮ ಆರಂಭಿಸಿದ್ದರು. ಪ್ರಸ್ತುತ ಈಗಲೂ ಅದೇ ಉದ್ಯಮದಲ್ಲಿದ್ದರು. ಅಲ್ಲದೇ ಎಲ್‍ಕೆಜಿಯಿಂದ ತಾಂತ್ರಿಕ ಮಹಾವಿದ್ಯಾಲಯದವರೆಗೆ ಅವರು ಶಿಕ್ಷಣ ಸಂಸ್ಥೆಗಳನ್ನ ಕಟ್ಟಿದ್ದರು.

ಉದ್ಯಮದ ಜೊತೆಗೆ 1996ರಲ್ಲಿ ಬಿಜೆಪಿ ಸದಸ್ಯರಾಗಿ ತಮ್ಮ ಸಾಮರ್ಥ್ಯ, ಸಂಘಟನೆ ಮನೋಭಾವದಿಂದ ಬಿಜೆಪಿ ಉಪಾಧ್ಯಕ್ಷರಾಗಿದ್ದರು. 2001ರಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿದ್ದರು. 2004ರಿಂದ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡು ಗೆಲುವನ್ನು ತಮ್ಮದಾಗಿಸಿಕೊಳ್ಳುತ್ತಾ ಬಂದಿದ್ದರು. ಅಲ್ಲಿಂದ ಈವರೆಗೆ ಸತತ ನಾಲ್ಕು ಸಲ ಗೆಲುವು ದಾಖಲಿಸಿ 2019ರಲ್ಲಿ ಪ್ರಧಾನಿ ಮೋದಿ ಸಂಪುಟದಲ್ಲಿ ರೈಲ್ವೆ ಇಲಾಖೆ ರಾಜ್ಯ ಸಚಿವ ಸ್ಥಾನ ಪಡೆದಿದ್ದರು.

ಆರೋಗ್ಯರಾಗಿದ್ದವರು ದಿಢಿರ್ ನಿಧನ :ಸುರೇಶ್​ ಅಂಗಡಿ ಅವರು ರಾಜಕೀಯ, ಉದ್ಯಮ ಒತ್ತಡ ಇದ್ದರೂ ಆರೋಗ್ಯದ ಕಡೆಗೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಮನೆ ಆಹಾರವನ್ನೇ ಸೇವಿಸುತ್ತಿದ್ದ ಸುರೇಶ್​ ಅಂಗಡಿ, ಯಾವುದೇ ಕಾರಣಕ್ಕೂ ಹೋಟೆಲ್ ಹಾಗೂ ಬೇರೆ ಕಡೆ ಆಹಾರ ಸೇವಿಸುತ್ತಿರಲಿಲ್ಲ. ಆರೋಗ್ಯವಂತರಾಗಿದ್ದ ಸುರೇಶ್​ ಅಂಗಡಿ ದಿಢೀರ್ ವಿಧಿವಶರಾಗಿದ್ದು, ಕುಟುಂಬ ಸದಸ್ಯರಷ್ಟೇ ಅಲ್ಲ, ಅವರ ಹತ್ತಿರದ ವ್ಯಕ್ತಿಗಳೂ ದಿಗ್ಭ್ರಮೆಯಾಗಿದೆ. ಪತ್ನಿ ಮಂಗಲಾ ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಸುರೇಶ ಅಂಗಡಿ ಅವರ ಕಿರಿಯ ಪುತ್ರಿ ಶೃದ್ಧಾ ಅಂಗಡಿ ಅವರನ್ನು ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರ ದ್ವಿತೀಯ ಸುಪುತ್ರನಿಗೆ ಮದುವೆ ಮಾಡಿ ಕೊಡಲಾಗಿದೆ.

ABOUT THE AUTHOR

...view details