ಬೆಳಗಾವಿ: ಪೂರಕ ಅಂದಾಜುಗಳ ಕುರಿತು ಸುದೀರ್ಘ ಚರ್ಚೆ ವೇಳೆ ಆಡಳಿತ -ಪ್ರತಿಪಕ್ಷಗಳ ಸದಸ್ಯರ ನಡುವೆ ಏಟು - ಪ್ರತಿ ಏಟು ನಡೆಯುತ್ತಿದ್ದ ಮಧ್ಯೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಗರಂ ಆದ ಪ್ರಸಂಗವೂ ವಿಧಾನಸಭೆಯಲ್ಲಿ ನಡೆಯಿತು. ಪೂರಕ ಅಂದಾಜುಗಳ ಕುರಿತು ಸುದೀರ್ಘ ಚರ್ಚೆ ನಡೆಯುತ್ತಿರುವಾಗಲೇ ಇದನ್ನು ಗಮನಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಆದಷ್ಟು ಬೇಗ ಚರ್ಚೆ ಮುಗಿಸಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಮಾತನಾಡಲು ಅವಕಾಶ ಕಲ್ಪಿಸಬೇಕು ಎಂದು ಸ್ಪೀಕರ್ ಅವರನ್ನು ಒತ್ತಾಯಿಸಿದರು.
4 ಲಕ್ಷ ಕೋಟಿ ಅಧಿಕ ಮೊತ್ತದ ಸಾಲದ ಹೊರೆ: ಪೂರಕ ಅಂದಾಜುಗಳು ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕ ಕೃಷ್ಣ ಬೈರೇಗೌಡ ಅವರ ನಡುವಿನ ಚರ್ಚೆ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಯತ್ನಾಳ್, ಇಷ್ಟೆಲ್ಲ ಬುದ್ಧಿವಂತರಿದ್ದರೂ 4 ಲಕ್ಷ ಕೋಟಿ ರೂಪಾಯಿ ಅಧಿಕ ಮೊತ್ತದ ಸಾಲದ ಹೊರೆ ರಾಜ್ಯದ ಮೇಲೆ ಹೇಗೆ ಬಿತ್ತು ಎಂದು ಪ್ರಶ್ನಿಸಿದರು. ಆದಷ್ಟು ಬೇಗ ಈ ಚರ್ಚೆ ಪೂರ್ಣಗೊಳಿಸಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ಅವಕಾಶ ಮಾಡಿಕೊಡಿ ಎಂದು ಆಗ್ರಹಿಸಿದರು.
ಆಗ ಕೃಷ್ಣಬೈರೇಗೌಡ ಅವರು ನಾನು ಒಬ್ಬ ಶಾಸಕನಾಗಿ ರಾಜ್ಯ ಹಣಕಾಸಿನ ಪರಿಸ್ಥಿತಿ ಕುರಿತು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದೇನೆ. ಇದು ನನ್ನ ಹಕ್ಕು ಎಂದು ತಿರುಗೇಟು ನೀಡಿದರು. ಪ್ರತಿಪಕ್ಷದಲ್ಲಿ ಕುಳಿತು ನಾನು ಸರ್ಕಾರವನ್ನು ಹೊಗಳಲು ಬಂದಿಲ್ಲ. ಅಂಕು - ಡೊಂಕುಗಳನ್ನು ಹೇಳುವುದು ನನ್ನ ಕೆಲಸ. ಆಗ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ, ಕೃಷ್ಣಬೈರೇಗೌಡರು ಬಹಳಷ್ಟು ಮಾಹಿತಿ ನೀಡಿದ್ದಾರೆ, ಮಾತು ಕಲಿಸಿದ್ದಾರೆ. ಕೆಲವನ್ನು ತಿರುಚಿ ಹೇಳುವುದಲ್ಲ. ನೀವು ಹೊಗಳಿ ಎಂದು ಹೇಳುವುದಿಲ್ಲ. ನೀವು ಟೀಕೆ ಮಾಡಿದಷ್ಟು ನಮಗೆ ಸತ್ಯ ಹೇಳಲು ಅನುಕೂಲ ಆಗುತ್ತದೆ ಎಂದು ತಿರುಗೇಟು ನೀಡಿದರು.