ಕರ್ನಾಟಕ

karnataka

ETV Bharat / state

8001.12 ಕೋಟಿ ರೂ. ಮೊತ್ತದ ಎರಡನೇ ಕಂತಿನ ಪೂರಕ ಅಂದಾಜು ವಿಧಾನಸಭೆಯಲ್ಲಿ ಮಂಡನೆ, - ETv Bharat kannada news

ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ವೆಚ್ಚ ಭರಿಸಲು ಹಣ, ರಾಜ್ಯಪಾಲರು, ಮುಖ್ಯಮಂತ್ರಿಯವರು, ಸಚಿವರು ಹಾಗೂ ಇತರೆ ಗಣ್ಯರ ಪ್ರಯಾಣಕ್ಕೆ ಹೆಲಿಕಾಪ್ಟರ್ ಬಿಲ್, ಅತಿವೃಷ್ಠಿ ಪರಿಹಾರ ಹಾಗು ಇಲಾಖಾವಾರು ಅನುದಾನ ಇದರಲ್ಲಿ ಸೇರಿದೆ.

Law and Parliamentary Affairs Minister J.C. Madhuswamy
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ

By

Published : Dec 26, 2022, 9:48 PM IST

ಬೆಳಗಾವಿ :8001.12 ಕೋಟಿ ರೂ. ಮೊತ್ತದ ಎರಡನೇ ಕಂತಿನ ಪೂರಕ ಅಂದಾಜನ್ನು ವಿಧಾನಸಭೆಯಲ್ಲಿ ಇಂದು ಮುಖ್ಯಮಂತ್ರಿಗಳ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಂಡನೆ ಮಾಡಿದರು. ವಿಧಾನಸಭಾ ಚುನಾವಣೆಯಲ್ಲಿ ವೆಚ್ಚ ಭರಿಸಲು 300 ಕೋಟಿ ರೂ., ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರು ಸೇರಿದಂತೆ ಗಣ್ಯರ ಹೆಲಿಕಾಪ್ಟರ್ ಬಳಕೆಗೆ ಹೆಚ್ಚುವರಿಯಾಗಿ 6 ಕೋಟಿ ರೂ., ಗಂಟು ರೋಗದಿಂದ ಮೃತಪಟ್ಟ ರಾಸುಗಳ ಮಾಲೀಕರಿಗೆ ಪರಿಹಾರ ಒದಗಿಸಲು 30 ಕೋಟಿ ರೂ. ಸೇರಿದಂತೆ ಎಲ್ಲವನ್ನೂ ಸೇರಿದ ಅಂದಾಜನ್ನು ಅವರು ಪ್ರಸ್ತುತಪಡಿಸಿದರು.

ಸದನದಿಂದ ಅಂಗೀಕೃತವಲ್ಲದ ವೆಚ್ಚ 1,806.18 ಕೋಟಿ ರೂ., ಅಂಗೀಕೃತಗೊಂಡ 6,194.95 ಕೋಟಿ ರೂ. ವೆಚ್ಚ ಸೇರಿ 8,0001.12 ಕೋಟಿ ರೂ ಪೂರಕ ಅಂದಾಜುಗಳನ್ನು ಮಂಡಿಸಿದ್ದು, ಈ ಪೈಕಿ 1,799 ಕೋಟಿ ರೂ. ಹೊಂದಾಣಿಕೆ ವೆಚ್ಚ ಹಾಗೂ 1,134 ಕೋಟಿ ರೂ. ಕೇಂದ್ರ ಸಹಯೋಗದ ಹಣವಾಗಿದ್ದು, ರಾಜ್ಯದ ಬೊಕ್ಕಸದಿಂದ ವೆಚ್ಚವಾಗಿರುವ 5,067.40 ಕೋಟಿ ರೂ. ಎಂದು ಪೂರಕ ಅಂದಾಜುಗಳಲ್ಲಿ ಉಲ್ಲೇಖಿಸಲಾಗಿದೆ.

ಉಳಿದಂತೆ, ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಸೇರುವ 300 ಕೋಟಿ ರೂ. ವೆಚ್ಚ ಸೇರಿದಂತೆ 469.19 ಕೋಟಿ ರೂ. ಹಣ ಒದಗಿಸಲಾಗುವುದು. ರಾಜ್ಯಪಾಲರು, ಮುಖ್ಯಮಂತ್ರಿಯವರು, ಸಚಿವರು ಹಾಗೂ ಇತರೆ ಗಣ್ಯರ ಪ್ರಯಾಣಕ್ಕೆ ಬಾಡಿಗೆ ಆಧಾರದ ಮೇಲೆ ಹೆಲಿಕಾಪ್ಟರ್ ಬಿಲ್ ಪಾವತಿಸಲು 6 ಕೋಟಿ ರೂ. ಒದಗಿಸಲಾಗಿದೆ ಎಂದು ತಿಳಿಸಿದರು.

ಅತಿವೃಷ್ಠಿ ಪರಿಹಾರ:ಅತಿವೃಷ್ಠಿಯಿಂದ ಆದ ಬೆಳೆ ಹಾನಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಪರಿಹಾರ ನೀಡಲು 758.19 ಕೋಟಿ ರೂ. ಅನುದಾನ, ಜಲಧಾರೆ ಯೋಜನೆ ನಿರ್ವಹಣೆ, ವಿದ್ಯುತ್ ವೆಚ್ಚಗಳಿಗಾಗಿ 200 ಕೋಟಿ ರೂ., ಬಂಧನದಲ್ಲಿದ್ದ ಕೈದಿಗಳ ಸಾವಿಗೆ ಪರಿಹಾರ ನೀಡಲು 50 ಲಕ್ಷ ರೂ., ಮುಖ್ಯಮಂತ್ರಿಗಳ ಕ್ಷೇತ್ರವಾದ ಶಿಗ್ಗಾಂವ್ ತಾಲೂಕಿನಲ್ಲಿ ಹೈಮಾಸ್ಟ್ ವಿದ್ಯುತ್ ದೀಪ ಅಳವಡಿಕೆಗೆ 2 ಕೋಟಿ ರೂ., ಶಿಗ್ಗಾಂವ್ ತಾಲ್ಲೂಕು ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನ ಒದಗಿಸಲಾಗಿದೆ.

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ 55.42 ಕೋಟಿ ರೂ. ಒದಗಿಸಿದ್ದು, ಇದರಲ್ಲಿ ಗಂಟು ರೋಗದಿಂದ ಮೃತಪಟ್ಟ ರಾಸುಗಳ ಮಾಲೀಕರಿಗೆ ಪರಿಹಾರ ನೀಡಲು 30 ಕೋಟಿ ರೂ. ಹಾಗೂ ಸ್ಥಳೀಯ ಗೋ ತಳಿಗಳನ್ನು ಸಂರಕ್ಷಿಸಲು ಮತ್ತು ಅವುಗಳ ಸಂತತಿ ಹೆಚ್ಚಿಸಲು ಕೆಎಂಎಫ್ ಮೂಲಕ ಗೋ ತಳಿಗಳನ್ನು ರೈತರಿಗೆ ಹಂಚಿಕೆ ಮಾಡಲು 7 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಇನ್ನು ಮೀನುಗಾರಿಕೆ ಇಲಾಖೆಯಿಂದ ನಾಡದೋಣಿಗಳಿಗೆ ಸೀಮೆಎಣ್ಣೆ ಸರಬರಾಜಿಗೆ 18.42 ಕೋಟಿ ರೂ. ನೀಡಲಾಗಿದೆ.

ದಿ.ಪುನೀತ್‍ ರಾಜ್‍ಕುಮಾರ್ ಅವರ ಶಕ್ತಿಧಾಮ ಸಂಸ್ಥೆಗೆ 2.5 ಕೋಟಿ ರೂ. ಹಾಗೂ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಕಾರ್ಯಕ್ರಮಕ್ಕೆ ವೆಚ್ಚವಾಗಿರುವ ಹೆಚ್ಚುವರಿ 5 ಕೋಟಿ ರೂ., ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ 4.99 ಕೋಟಿ ರೂ. ಹೆಚ್ಚುವರಿಯಾಗಿ 5 ಸಾವಿರ ಹಕ್ಕು ಪತ್ರ ಒದಗಿಸಲು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಯಾದಗಿರಿ ಜಿಲ್ಲೆ ಕಾರ್ಯಕ್ರಮಕ್ಕೆ 7 ಕೋಟಿ ರೂ. ಹೆಚ್ಚುವರಿಯಾಗಿ ಮಂಜೂರು ಮಾಡಲಾಗಿದೆ.

ಕರ್ನಾಟಕ ಕಂದಾಯ ಇಲಾಖೆಯ ಸಾಧನೆಗಳ ಹೆಸರಿನ ಕಾಫಿ ಟೇಬಲ್ ಪುಸ್ತಕಕ್ಕೆ ಹೆಚ್ಚುವರಿಯಾಗಿ 30 ಲಕ್ಷ ರೂ., ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನಲ್ಲಿ ಕುಂಭಮೇಳ ನಡೆಸಲು 4 ಕೋಟಿ ರೂ., 1 ಲಕ್ಷ ಬಹುಮಹಡಿ ವಸತಿ ಯೋಜನೆಗೆ 256 ಕೋಟಿ ರೂ., ಬಿಬಿಎಂಪಿಯಲ್ಲಿನ ಸಿಬ್ಬಂದಿ ಮತ್ತು ಅಧಿಕಾರಿಗಳ ವೇತನಕ್ಕಾಗಿ 200 ಕೋಟಿ ರೂ., ಇತ್ತೀಚೆಗೆ ಮೃತರಾದ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಅವರು ಪಡೆದಿದ್ದ ಚಿಕಿತ್ಸೆಗೆ 46 ಲಕ್ಷ ರೂ. ಹೆಚ್ಚುವರಿಯಾಗಿ ಪಾವತಿಸಲು ಹಣ ನೀಡಲು ಪೂರಕ ಅಂದಾಜುಗಳಲ್ಲಿ ಉಲ್ಲೇಖಿಸಲಾಗಿದೆ.

ಇಲಾಖಾವಾರು ಅನುದಾನ ವಿವರ: ಆರ್ಥಿಕ ಇಲಾಖೆಗೆ 48.60 ಕೋಟಿ ರೂ., ಒಳಾಡಳಿತ ಮತ್ತು ಸಾರಿಗೆ 113.65 ಕೋಟಿ ರೂ., ಗ್ರಾಮೀಣಾಭಿವೃದ್ಧಿ ಇಲಾಖೆ 1,154.54 ಕೋಟಿ ರೂ., ಆಹಾರ ಇಲಾಖೆ 5.25 ಕೋಟಿ ರೂ., ಕಂದಾಯ 1,425.08 ಕೋಟಿ ರೂ., ಸಮಾಜ ಕಲ್ಯಾಣ 396.13 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ಕಲ್ಯಾಣ 43.28 ಕೋಟಿ ರೂ., ವಾರ್ತಾ, ಪ್ರವಾಸೋದ್ಯಮ, ಯುವಜನ ಸೇವೆಗಳ ಇಲಾಖೆಗೆ 160.88 ಕೋಟಿ ರೂ., ವಸತಿ ಇಲಾಖೆ 308.89 ಕೋಟಿ ರೂ., ಶಿಕ್ಷಣ 204.43 ಕೋಟಿ ರೂ., ವಾಣಿಜ್ಯ ಇಲಾಖೆ 7.97 ಕೋಟಿ ರೂ., ನಗರಾಭಿವೃದ್ಧಿ 201.50 ಕೋಟಿ ರೂ., ಲೋಕೋಪಯೋಗಿ 86.90 ಕೋಟಿ ರೂ., ಆರೋಗ್ಯ ಇಲಾಖೆ 88.72 ಕೋಟಿ ರೂ., ಕಾರ್ಮಿಕ ಇಲಾಖೆ 26.08 ಕೋಟಿ ರೂ.

ಇಂಧನ 692.61 ಕೋಟಿ ರೂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ 49.52 ಕೋಟಿ ರೂ., ಯೋಜನೆ, ಐಟಿ-ಬಿಟಿ ಇಲಾಖೆ 1.14 ಕೋಟಿ ರೂ., ಕಾನೂನು 140.17 ಕೋಟಿ ರೂ., ಸೇರಿ ವಿವಿಧ ಇಲಾಖೆಗಳಿಗೆ 8,001.12 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಪೂರಕ ಅಂದಾಜಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:3574.67 ಕೋಟಿ ರೂ.ಗಳ ಪೂರಕ ಅಂದಾಜುಗಳ ಎರಡನೇ ಕಂತಿಗೆ ವಿಧಾನ ಪರಿಷತ್ ಅಂಗೀಕಾರ

ABOUT THE AUTHOR

...view details