ಬೆಂಗಳೂರು/ಬೆಳಗಾವಿ: ನಿರಂತರ ಜ್ಯೋತಿ ಅವ್ಯವಹಾರ ಆರೋಪವನ್ನು ಲೋಕಾಯುಕ್ತ ತನಿಖೆಗೆ ಕೊಡಲು ತಾವು ಸಿದ್ಧ ಇರುವುದಾಗಿ ಎಂದು ಇಂಧನ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆ ವೇಳೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಪ್ರಸ್ತಾಪಿದ ವಿಷಯದ ಬಗ್ಗೆ ಉತ್ತರಿಸಿದ ಸಚಿವ ಸುನೀಲ್ ಕುಮಾರ್, ಬೆಂಗಳೂರಿನ ತುರುವೇಕೆರೆ, ಶಿವಮೊಗ್ಗ, ದಾವಣಗೆರೆಯಲ್ಲಿ ಆಗಿರುವ ಅವ್ಯವಹಾರ ಇದು. 2015-16ರಲ್ಲಿ ಆದ ಅವ್ಯವಹಾರ ಇದಾಗಿದೆ. ಸದನ ಸಮಿತಿ ಮಾಡಲು ನನ್ನ ವಿರೋಧ ಇಲ್ಲ. ನಾನು ಲೋಕಾಯುಕ್ತಕ್ಕೆ ಕೊಡಲು ಸಿದ್ಧ ಎಂದು ಸ್ಪಷ್ಟಪಡಿಸಿದರು.
ಅಕ್ರಮದ ಬಗ್ಗೆ ಗಮನಕ್ಕೆ ಬಂದಿತ್ತು.. ಈ ಸಂಬಂಧ ನಾನು ಶಿವಮೊಗ್ಗಕ್ಕೆ ಹೋಗಿ 2015-16ರಲ್ಲಿ ಏನಾಗಿದೆ ಎಂಬ ಬಗ್ಗೆ ಸಭೆಯಲ್ಲಿ ಮಾಹಿತಿ ತಿಳಿದುಕೊಂಡಿದ್ದೆ. ಖಾಸಗಿ ಎಲೆಕ್ಟ್ರಿಕ್ ಕಂಪನಿಗೆ ಟೆಂಡರ್ ಕೊಡಲಾಗಿತ್ತು. ಮೇಲ್ನೋಟಕ್ಕೆ ಅಕ್ರಮ ಆಗಿರುವುದು ಗಮನಕ್ಕೆ ಬಂದಿತ್ತು. ತಕ್ಷಣ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿದ್ದೆ. ಇದರ ಸಂಪೂರ್ಣ ಸತ್ಯಾಂಶ ಗೊತ್ತಾಗಲು ಮೆಸ್ಕಾಂ ಎಂಡಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ವರದಿ ಕೊಡಲು ತಡವಾಗಿದೆ. ಸಮಿತಿಯಿಂದ ಇನ್ನು ಒಂದು ವಾರದಲ್ಲಿ ವರದಿ ತರಿಸಿ, ಒಂದು ವೇಳೆ ಸಮಾಧಾನ ಆಗಿಲ್ಲ ಅಂದರೆ ಬಳಿಕ ಯಾವ ತನಿಖೆ ಮಾಡಬೇಕು ಎಂಬ ಬಗ್ಗೆ ತೀರ್ಮಾನ ಮಾಡುತ್ತೇವೆ. ಇದರಲ್ಲಿ ಯಾರನ್ನೂ ರಕ್ಷಣೆ ಮಾಡುವುದಿಲ್ಲ ಎಂದು ಸದನಕ್ಕೆ ಸಚಿವರು ಹೇಳಿದರು.
ಇದನ್ನೂ ಓದಿ:ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಜಾರಿ ಇಲ್ಲ, ಕಲ್ಲಿದ್ದಲು ಕೊರತೆಯೂ ಇಲ್ಲ: ಸಚಿವ ಸುನೀಲ್ ಕುಮಾರ್
ಅಧಿಕಾರಿಗಳ ವಿರುದ್ಧ ಬೇಜವಾಬ್ದಾರಿ ಆರೋಪ.. ಇದಕ್ಕೂ ಮುನ್ನ ರಾಜ್ಯದಲ್ಲಿ ನಿರಂತರ ಜ್ಯೋತಿ ಯೋಜನೆಯಡಿ ಆಗಿರುವ ಅಕ್ರಮದ ಬಗ್ಗೆ ಗಮನ ಸೆಳೆದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ, ವ್ಯವಸ್ಥಿತವಾಗಿ ಅವ್ಯವಹಾರ ಮುಚ್ಚುವ ಕೆಲಸ ಆಗಿದೆ. ನಿರಂತರ ಜ್ಯೋತಿ ಯೋಜನೆ ಎಲ್ಲ ಬಡವರಿಗೆ ವಿದ್ಯುತ್ ಸಂಪರ್ಕ ಕೊಡುವ ಕೇಂದ್ರ ಸರ್ಕಾರದ ಯೋಜನೆ ಆಗಿದೆ. ವಿದ್ಯುತ್ ಕಂಬವನ್ನು ಐದಡಿ ನೆಡಬೇಕು ಎಂದಿದೆ. ಆದರೆ ಕಂಬಗಳನ್ನು ಎರಡು ಅಡಿ, ಮೂರಡಿ ಆಳಕ್ಕೆ ಮಾತ್ರ ನೆಟ್ಟಿದ್ದಾರೆ. ಇದರಿಂದ ಗಾಳಿ ಬಂದರೆ ಕಂಬಗಳು ಬೀಳುವ ಅಪಾಯವಿದೆ. ಅವ್ಯವಹಾರ ಪರಿಶೀಲಿಸಲು ಸಮಿತಿ ರಚನೆಯಾಗಿದೆ. ಸಮಿತಿ ಒಂದು ತಿಂಗಳಲ್ಲಿ ವರದಿ ಕೊಡಬೇಕು ಎಂದು ಹೇಳಲಾಗಿತ್ತು. ಸಮಿತಿ ರಚನೆಯಾಗಿ 9 ತಿಂಗಳು ಮುಗಿದರೂ ಇನ್ನೂ ವರದಿ ಬಂದಿಲ್ಲ. ಇದು ಅಧಿಕಾರಿಗಳ ಬೇಜವಾಬ್ದಾರಿ ತೋರಿಸುತ್ತದೆ ಎಂದು ಆರೋಪಿಸಿದರು.
ಇದನ್ನೂ ಓದಿ:ಹೈಬ್ರೀಡ್ ಪಾರ್ಕ್ ಮೂಲಕ 1,000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ: ಸಚಿವ ಸುನೀಲ್ ಕುಮಾರ್
ಅಕ್ರಮ ತನಿಖೆಗೆ ಒಂದು ವಿಧಾನಸಭೆ ಸದನ ಸಮಿತಿ ರಚಿಸಿ. 15 ದಿನ ಕೊಡಲಿ, ಎಷ್ಟು ಲೂಟಿ ಆಗಿದೆ ಎಂದು ಹೇಳುತ್ತೇನೆ. ಅಧಿಕಾರಿಗಳೇ ಕೊಟ್ಟ ದೃಢೀಕರಣ ಪತ್ರದ ಪ್ರಕಾರ 37 ಫೀಡರ್ ಗಳಲ್ಲಿ 12 ಕೋಟಿ ರೂಪಾಯಿ ವ್ಯತ್ಯಾಸ ಕಂಡು ಬಂದಿದೆ. ಎಲ್ಲಾ ಫೀಡರ್ ಪರಿಶೀಲಿಸಿದರೆ ಸುಮಾರು 45 ಕೋಟಿ ರೂ.ವ್ಯತ್ಯಾಸ ಆಗುತ್ತೆ. ಇದನ್ನು ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ಗುತ್ತಿಗೆದಾರರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಹಳೆ ಸಾಮಗ್ರಿಗಳನ್ನು ಉಗ್ರಾಣಕ್ಕೆ ಕಳುಹಿಸುವ ಬದಲು ಗುತ್ತಿಗೆದಾರರು ಕೊಂಡೊಯ್ದಿದ್ದಾರೆ. ನನ್ನ ಬಳಿ ಎಲ್ಲಾ ದಾಖಲೆ ಇದೆ ಎಂದು ಈಶ್ವರಪ್ಪ ಹೇಳಿದರು.
ಇದನ್ನೂ ಓದಿ:ಕೆಪಿಟಿಸಿಎಲ್ ಎಇ, ಜೆಇ ನೇಮಕ ಪರೀಕ್ಷೆ.. ಜನವರಿ ಮೊದಲ ವಾರದಲ್ಲಿ ಫಲಿತಾಂಶ