ಬೆಳಗಾವಿ:ಕರ್ನಾಟಕ ರಣಜಿ ಕ್ರಿಕೆಟ್ ತಂಡದಲ್ಲಿ ಜಿಲ್ಲೆಯ ಯುವ ವಿಕೆಟ್ ಕೀಪರ್ ಬ್ಯಾಟರ್ ಸುಜಯ್ ಸಾತೇರಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯುತ್ತಿರುವ ಗುಜರಾತ್ ವಿರುದ್ಧದ ಎಲೈಟ್ 'ಸಿ' ವಿಭಾಗದ ಪಂದ್ಯದಲ್ಲಿ ಸುಜಯ್ ಕರ್ನಾಟಕದ ಪರ ಆಡುತ್ತಿದ್ದಾರೆ. ಈ ಮೂಲಕ ಬೆಳಗಾವಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಸುಜಯ್ ಸಾತೇರಿ ಅವರ ಹಲವು ವರ್ಷಗಳ ಕಠಿಣ ಪರಿಶ್ರಮಕ್ಕೆ ಈಗ ಫಲ ಸಿಕ್ಕಂತಾಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೊಸಿಯೇಷನ್ ಲೀಗ್ನ ಫಸ್ಟ್ ಡಿವಿಜನ್ ಪಂದ್ಯಾವಳಿ ಸೇರಿದಂತೆ ಮತ್ತಿತರ ಟೂರ್ನಿಗಳಲ್ಲಿನ ಅಮೋಘ ಸಾಧನೆಯಿಂದ ರಾಜ್ಯ ರಣಜಿ ತಂಡಕ್ಕೆ ಅವರು ಆಯ್ಕೆಯಾಗಿದ್ದಾರೆ. ಗುಜರಾತ್ ವಿರುದ್ಧದ ಪಂದ್ಯದಲ್ಲಿ ಆಡುತ್ತಿರುವ ಸುಜಯ್, ಕೀಪಿಂಗ್ ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಬ್ಯಾಟಿಂಗ್ ಬಲ ತುಂಬಲಿದ್ದಾರೆ.
ಮುನ್ನಡೆ ಸಾಧಿಸಿದ ಕರ್ನಾಟಕ:ಬೆಳಗಾವಿ ಸ್ಪೋರ್ಟ್ಸ್ ಕ್ಲಬ್ನಲ್ಲಿ ತರಬೇತಿ ಪಡೆಯುತ್ತಿದ್ದ ಸುಜಯ್ ಸಾತೇರಿ ಅಂಡರ್ 16, ಅಂಡರ್ 19, ಅಂಡರ್ 23, ಅಂಡರ್ 25 ಅಂತಾರಾಜ್ಯ ಪಂದ್ಯಾವಳಿಯಲ್ಲಿ 8 ವರ್ಷ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಉತ್ತಮ ಆಟ ತೋರಿದ್ದರು. ಅಲ್ಲದೇ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಆಯ್ಕೆಯಾಗಿದ್ದರು. ಗುಜರಾತ್ ವಿರುದ್ಧ ಉತ್ತಮ ವಿಕೆಟ್ ಕೀಪಿಂಗ್ ಮಾಡಿರುವ ಸುಜಯ್ ಮೂರು ಕ್ಯಾಚ್ಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೇ, 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗಿಳಿದ ಸುಜಯ್, 35 ಎಸೆತಗಳಲ್ಲಿ ಅಜೇಯ 24 ರನ್ ಗಳಿಸಿ, ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ ಗುಜರಾತ್ ತಂಡ 264 ರನ್ ಗಳಿಸಿದರೆ, ಕರ್ನಾಟಕ ತಂಡ ಎರಡನೇ ದಿನದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 328 ರನ್ ಕಲೆ ಹಾಕಿ, 64 ರನ್ಗಳ ಮುನ್ನಡೆ ಸಾಧಿಸಿದೆ.