ಬೆಳಗಾವಿ:ರಾಜ್ಯದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ಹಾಗೂ ಅತಿ ಹೆಚ್ಚು ಸಕ್ಕರೆ ಕಾರ್ಖಾನೆ ಹೊಂದಿರುವ ಕೀರ್ತಿಗೆ ಗಡಿ ಜಿಲ್ಲೆ ಬೆಳಗಾವಿ ಪಾತ್ರವಾಗಿದೆ. ಅತಿವೃಷ್ಟಿ ಹೊಡೆತದ ಮಧ್ಯೆಯೂ ನಿರೀಕ್ಷೆಗೂ ಮೀರಿ ಈ ಸಲ ಕಬ್ಬಿನ ಇಳುವರಿ ಬಂದಿದೆ. ಗದ್ದೆಗಳಲ್ಲಿ ನಳನಳಿಸುತ್ತಿರುವ ಕಬ್ಬು ಈ ಸಲವಾದರೂ ಸಿಹಿ ತರುತ್ತೆ ಎಂಬ ನಿರೀಕ್ಷೆಯನ್ನು ಕಬ್ಬು ಬೆಳೆಗಾರರು ಹೊಂದಿದ್ದಾರೆ.
ಮಲಪ್ರಭಾ, ಘಟಪ್ರಭಾ, ಕೃಷ್ಣಾ, ಮಾರ್ಕೆಂಡೆಯ, ಹಿರಣ್ಯಕೇಶಿ, ವೇದಗಂಗಾ ಹಾಗೂ ದೂದಗಂಗಾ ಸೇರಿದಂತೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಸಪ್ತನದಿಗಳಿವೆ. ಮಹಾರಾಷ್ಟ್ರ ಹಾಗೂ ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದ ಜಿಲ್ಲೆಯ ಸಪ್ತನದಿಗಳೆಲ್ಲವೂ ತುಂಬಿ ಹರಿದವು. ಪರಿಣಾಮ ನದಿ ತೀರದ ಲಕ್ಷಾಂತರ ಹೆಕ್ಟೇರ್ ಕಬ್ಬಿನ ಗದ್ದೆಗೆ ನೀರು ನುಗ್ಗಿ ಲಕ್ಷಾಂತರ ಹೆಕ್ಟೇರ್ ಕಬ್ಬು ಜಲಾವೃತಗೊಂಡಿದ್ದವು. ಆದರೂ ಈ ಸಲ ಜಿಲ್ಲೆಯಲ್ಲಿ ಕಬ್ಬಿನ ಅತ್ಯುತ್ತಮ ಇಳುವರಿ ಬಂದಿದೆ. ಹೀಗಾಗಿ, ಜಿಲ್ಲೆಯ ಕೆಲ ಸಕ್ಕರೆ ಕಾರ್ಖಾನೆಗಳು ತಿಂಗಳ ಮೊದಲೇ ಕಬ್ಬು ನುರಿಸಲು ಮುಂದಾಗಿವೆ.
ವಾಡಿಕೆಯಂತೆ ಅಕ್ಟೋಬರ್ ಅಂತ್ಯ ಇಲ್ಲವೇ ನವೆಂಬರ್ ಮೊದಲ ವಾರದಲ್ಲಿ ಎಲ್ಲ ಕಾರ್ಖಾನೆಗಳಲ್ಲಿ ಕಬ್ಬನ್ನು ನುರಿಸುತ್ತಿದ್ದವು. ಕಬ್ಬು ಬೆಳೆಯುವ ಪ್ರದೇಶಗಳಲ್ಲಿ ಈ ಸಲ ಉತ್ತಮ ಮಳೆಯಾಗಿದೆ. ಕಬ್ಬಿನ ಬೆಳೆ ಬೆಳವಣಿಗೆ ಸಮಯದಲ್ಲಿ ಸಾಕಷ್ಟು ನೀರು ಸಿಕ್ಕಿರುವ ಕಾರಣ ಇಳುವರಿ ಅಧಿಕ ಪ್ರಮಾಣದಲ್ಲಿ ಬಂದಿದೆ.
ಕಳೆದ ವರ್ಷದ ಪ್ರಚಂಡ ಪ್ರವಾಹಕ್ಕೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ 2019-20ನೇ ಸಾಲಿನಲ್ಲಿ 1.25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿತ್ತು. ಅಲ್ಲದೇ 126 ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ನುರಿಸಲಾಗಿತ್ತು. ಪ್ರಸಕ್ತ ವರ್ಷ ಉತ್ತಮ ಮಳೆಯಾದ ಕಾರಣ 1.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಾಗಿದ್ದು, 150ರಿಂದ 180 ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ನರಿಸುವ ನಿರೀಕ್ಷೆಯನ್ನು ಹೊಂದಲಾಗಿದೆ.