ಚಿಕ್ಕೋಡಿ:ಕಬ್ಬು ಬೆಳೆಗಾರರ ಸಂಕಟಕ್ಕೆ ಕೊನೆ ಇಲ್ಲದಂತಾಗಿದೆ. ನೆರೆ ಹಾವಳಿಯಿಂದ ಅಳಿದುಳಿದ ಕಬ್ಬಿನ ಬೆಳೆಗೆ ಈಗ ಸೂಲಂಗಿ ಬಂದಿದ್ದು, ಕಬ್ಬು ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಳೆದ ಬೇಸಿಗೆಯಲ್ಲಿ ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತಿದ್ದರಿಂದ ನೀರಿಲ್ಲದೆ ಕಬ್ಬು ನಾಶವಾಗಿತ್ತು. ಅದರಲ್ಲೂ ಬಾವಿ, ಬೋರ್ವೆಲ್ಗಳಿಂದ ನೀರು ಹರಿಸಿ ಬೆಳೆದ ಕಬ್ಬು ಪ್ರವಾಹಕ್ಕೆ ಹಾಳಾಗಿದೆ. ಈಗ ಉಳಿದ ಕಬ್ಬಿಗೆ ಸೂಲಂಗಿ ಬೆಳೆಯುತ್ತಿರುವುದರಿಂದ ಬೆಳೆದ ಕಬ್ಬು ಬೆಂಡೊಡೆಯುತ್ತಿದೆ. ಕಬ್ಬಿನಲ್ಲಿ ತೂಕ ಕಡಿಮೆಯಾಗುತ್ತಿದೆ. ಇದರಿಂದ ಮತ್ತೆ ನದಿ ತೀರದ ರೈತ ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಬ್ಬು ನಾಟಿ ಮಾಡಿದ 11 ತಿಂಗಳ ಬಳಿಕ ಸೂಲಂಗಿ ಬರುತ್ತದೆ. ಆದರೆ, ಈ ಬಾರಿ 5 ರಿಂದ 8 ತಿಂಗಳ ಅವಧಿಯಲ್ಲೇ ಸೂಲಂಗಿ ಮೂಡಿದೆ. ಸೂಲಂಗಿ ಕಾಣಿಸಿಕೊಳ್ಳಾರಂಭಿಸಿದರೆ ಆದಷ್ಟು ಬೇಗ ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಕಳುಹಿಸಬೇಕು. ತಡ ಮಾಡಿದಷ್ಟೂ ಕಬ್ಬು ಬೆಂಡೊಡೆಯಲಾರಂಭಿಸುತ್ತದೆ.
ಒಂದು ಎಕರೆಗೆ 35ರಿಂದ 40 ಟನ್ ಕಬ್ಬಿನ ಫಸಲು ಸಿಗುತ್ತಿದ್ದರೆ, ಸೂಲಂಗಿ ಬಂದಾಗ 24ರಿಂದ 28 ಟನ್ ಮಾತ್ರ ಸಿಗುವ ಸಾಧ್ಯತೆ ಇದೆ. ಮಳೆ, ನೆರೆಯಿಂದ ಈ ಬಾರಿ ಶೇ. 40ರಷ್ಟು ಕಬ್ಬಿನ ಬೆಳೆ ನಾಶವಾಗುದ್ದು, ಉಳಿದ ಕಬ್ಬಿನ ಬೆಳೆಗೆ ಕಬ್ಬು ಕಟಾವು ಮಾಡುವ ಮೊದಲೇ ಸೂಲಂಗಿ ಕಾಣಿಸಿಕೊಂಡಿದೆ.