ಬೆಳಗಾವಿ:ರಾಜ್ಯ ವಿಧಾನಮಂಡಲ ಉಭಯ ಸದನಗಳ ಚಳಿಗಾಲ ಅಧಿವೇಶನವನ್ನು ಡಿಸೆಂಬರ್ ತಿಂಗಳಲ್ಲಿ ಇಲ್ಲಿನ ಸುವರ್ಣಸೌಧದಲ್ಲಿ ನಡೆಸಲಾಗುವುದು. ಜೊತೆಗೆ ಹಲವು ಕಚೇರಿಗಳ ಸ್ಥಳಾಂತರ ಸಂಬಂಧ ಕ್ರಮವಹಿಸುತ್ತೇನೆ. ಆರಂಭಿಕ ಹಂತವಾಗಿ ಸಕ್ಕರೆ ನಿರ್ದೇಶನಾಲಯ ಕಚೇರಿಯನ್ನು ಬೆಳಗಾವಿಗೆ ಸ್ಥಳಾಂತರ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಬೆಳಗಾವಿಯ ಸುವರ್ಣ ಸೌಧದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, ಸುವರ್ಣಸೌಧ ಕ್ರಿಯಾಶೀಲವಾಗಿರಬೇಕು ಎಂಬ ಬಯಕೆ ನನ್ನದು. ಅಧಿವೇಶನ ಜೊತೆಗೆ ಹಲವು ಕಚೇರಿ ಸ್ಥಳಾಂತರ ಮಾಡಲಾಗುವುದು. ಬೆಂಗಳೂರಿಗೆ ಹೋದ ನಂತರ ಈ ಸಂಬಂಧ ಆದೇಶ ಹೊರಡಿಸುತ್ತೇನೆ. ಬೆಂಗಳೂರಿನ ವಿಧಾನಸೌಧದಂತೆ ಬೆಳಗಾವಿ ಸುವರ್ಣಸೌಧ ಕಾರ್ಯನಿರ್ವಹಿಸಬೇಕು. ಇದಕ್ಕಾಗಿ ಹಂತಹಂತವಾಗಿ ಕಚೇರಿಗಳ ಸ್ಥಳಾಂತರ ಮಾಡುತ್ತೇನೆ ಎಂದರು.
ಎಲ್ಲರಿಗೂ ಒಂದೇ ನಿಯಮ:
ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಎಲ್ಲರಿಗೂ ಅನ್ವಯವಾಗುವಂತೆ ನಿಯಮಗಳನ್ನು ಜಾರಿಗೊಳಿಸಲಾಗಿದೆ ಎಂದು ಬಿಜೆಪಿ ಜನಾಶೀರ್ವಾದ ಯಾತ್ರೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ವಿನಯ್ ಕುಲಕರ್ಣಿ ಬಿಡುಗಡೆ ವೇಳೆ ಬೆಂಬಲಿಗರ ಅದ್ಧೂರಿ ಮೆರವಣಿಗೆ ಸಂಬಂಧ ಸ್ಥಳೀಯ ಅಧಿಕಾರಿಗಳು ಕ್ರಮ ಜರುಗಿಸುತ್ತಾರೆ ಎಂದು ಹೇಳಿದರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾಧ್ಯಮಗೋಷ್ಠಿ ಕೋವಿಡ್ ಸಭೆಗೆ ಬೆಳಗಾವಿ ಜಿಲ್ಲೆಯ ಬಿಜೆಪಿ ಶಾಸಕರು ಗೈರು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಎಲ್ಲ ಸಂದರ್ಭಗಳಲ್ಲಿ ಎಲ್ಲರೂ ಇರಬೇಕು ಅಂತಾ ಏನಿಲ್ಲ. ಲಕ್ಷ್ಮಣ್ ಸವದಿ ಜೊತೆ ನಿನ್ನೆ ಮಾತನಾಡಿದ್ದೇನೆ. ಅಭಯ್ ಪಾಟೀಲ್ ಇಂದು ಭೇಟಿಯಾಗಿ ಹೋಗಿದ್ದಾರೆ. ಸಭೆಗೆ ಗೈರಾಗಿರುವ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಸಂಪರ್ಕಕ್ಕೆ ಯತ್ನಿಸಿದ್ದೇನೆ. ಯಾವುದೇ ರೀತಿಯ ತೊಂದರೆ ಇಲ್ಲ. ಕಡಿಮೆ ಸಮಯದಲ್ಲಿ ಸಭೆ ಆಯೋಜನೆ ಆಗಿದ್ದು, ಕೆಲವರಿಗೆ ಅನಾನುಕೂಲವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಸದನದ ಯಾವ ಆಸನದಲ್ಲಿ ಆಸೀನರಾಗುತ್ತಾರೆ ಬಿಎಸ್ವೈ,ಶೆಟ್ಟರ್?