ಬೆಳಗಾವಿ: ಸಕ್ಕರೆ ಕಾರ್ಖಾನೆಗಳಿಂದ ಕಬ್ಬಿನ ತೂಕದಲ್ಲಿ ರೈತರಿಗೆ ಮೋಸ ಆರೋಪವಿರುವ ಹಿನ್ನೆಲೆಯಲ್ಲಿ ನಾವೇ ಇಲಾಖೆಯಿಂದ ತೂಕದ ಮಷಿನ್ ಹಾಕುವ ಬಗ್ಗೆ ಚಿಂತನೆ ಇದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹೇಳಿದರು. ಬೆಳಗಾವಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶೀಘ್ರವೇ ಸಕ್ಕರೆ ಕಾರ್ಖಾನೆಗಳ ಸಭೆ ಕರೆಯುತ್ತೇವೆ. ರಾತ್ರೋರಾತ್ರಿ ನಿರ್ಧಾರ ತೆಗೆದುಕೊಳ್ಳಲು ಆಗಲ್ಲ. ಪರಿಸ್ಥಿತಿ ಅನಿವಾರ್ಯವಾದರೆ ಸಕ್ಕರೆ ಕಾರ್ಖಾನೆಗಳಲ್ಲಿ ತೂಕದ ಯಂತ್ರ ಹಾಕಲೇಬೇಕಾಗುತ್ತೆ ಎಂದರು.
ಕಾರ್ಖಾನೆಯವರು ಸಾಕಷ್ಟು ಲಾಭ ಮಾಡಿಕೊಳ್ಳುತ್ತಾರೆ. ಆದರೆ ಕಾರ್ಖಾನೆಗಳು ಸರ್ಕಾರಕ್ಕೆ ಮತ್ತು ಸಂಸ್ಥೆಗೆ ಏನೂ ಸಹಾಯ ಮಾಡಿಲ್ಲ ಎಂಬುದು ನನ್ನ ಗಮನಕ್ಕೆ ಬಂದಿದೆ. ಒಂದು ಟನ್‌ಗೆ ಒಂದು ರೂಪಾಯಿ ಕೊಡುವುದನ್ನೂ ಕೆಲವು ಮಹಾಶಯರು ಮಾಡ್ತಿಲ್ಲ. ಅವರಿಗೆ ಇಂದು ಸಣ್ಣ ಸ್ಟೇ ತರಲು ಅಧಿಕಾರಿಗಳು ಬಿಟ್ಟಿದ್ದಾರೆ. ಅವರು ತಂದಿದ್ದಾರೆ ಅದಕ್ಕೆ ಮುಂದೆ ಹೋಗ್ತಿದ್ದಾರೆ. ನಾನೂ ಸಹ ಸಕ್ಕರೆ ಕಾರ್ಖಾನೆ ಮಾಲೀಕರನ್ನು ಕರೆದು ನಮ್ರತೆಯಿಂದ ವಿನಂತಿಸುತ್ತೇನೆ. ಇದೇ ರೀತಿ ಮುಂದುವರಿದರೆ ನಮಗೂ ನೋಡಿಕೊಳ್ಳಲು ಅವಕಾಶ ಇದೆ ಎಂದು ಎಚ್ಚರಿಕೆ ಕೊಟ್ಟರು.
ಹಲವು ಪ್ರಭಾವಿ ಶಾಸಕರು, ಸಚಿವರದ್ದು ಕಾರ್ಖಾನೆ ಇದೆಯಲ್ಲವೇ ಎಂಬ ಮಾಧ್ಯಮಗಳ ಪ್ರಶ್ನೆಗೆ, ನೂರಕ್ಕೆ ನೂರು ನಿಜ. ಶಾಸಕರು, ಸಚಿವರದ್ದು, ಸಾರ್ವಜನಿಕರದ್ದು ಸೇರಿದಂತೆ ಸರ್ಕಾರದ ಕಾರ್ಖಾನೆಗಳಿವೆ. ಸರ್ಕಾರಿ ಸ್ವಾಮ್ಯದ ಹತ್ತು ಕಾರ್ಖಾನೆ ನಾವೇ ಲೀಸ್ ಮೇಲೆ ಕೊಟ್ಟಿದ್ದೀವಿ. ಲೀಸ್ ಪಡೆದು ಲಾಭ ಮಾಡಿಕೊಂಡಿದ್ದಾರೆಯೇ ಹೊರತು ಸರ್ಕಾರಕ್ಕೆ ಲಾಭ ಮಾಡಿಕೊಟ್ಟಿಲ್ಲ. ಆ ಸಂಗತಿಯೂ ನನ್ನ ಗಮನಕ್ಕೆ ಇದೆ ಎಂದು ಹೇಳಿದರು.
ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ಸಕ್ಕರೆ ಸಂಸ್ಥೆಗೆ ಪ್ರತಿ ಟನ್‌ಗೆ 30 ರೂ. ಕೊಡ್ತಾರೆ. ನಾವು ಒಂದು ರೂಪಾಯಿ ಕೇಳುತ್ತಿದ್ದೀವಿ, ಎರಡು ರೂ. ಇದ್ದಿದ್ದನ್ನು ಒಂದು ರೂ. ಮಾಡಿದ್ದೇವೆ. ಒಂದು ಟನ್ ಕಬ್ಬಿನಿಂದ ಕಾರ್ಖಾನೆಯವರು 600 ರಿಂದ 800 ರೂ. ಉಳಿಸಿಕೊಳ್ಳುತ್ತಾರೆ. ಆ ಗೊಂದಲಕ್ಕೆ ನಾವು ಹೋಗೋದು ಬೇಡ, ಅವರು ಲಾಭ ಮಾಡಿಕೊಂಡು ಬದುಕಲಿ. ಕಾರ್ಖಾನೆ ಬದುಕಿದರೆ ರೈತರು ಬದುಕುತ್ತಾರೆ, ರೈತ ಬದುಕಿದರೆ ಕಾರ್ಖಾನೆಯವರು ಬದುಕುತ್ತಾರೆ ಎಂದು ವಿವರಿಸಿದರು.
ಈ ಸರ್ಕಾರ ರೈತನಿಗೆ ಪುಕ್ಸಟ್ಟೆ ನೀರು, ವಿದ್ಯುತ್ ಕೊಡುತ್ತೆ. ಅದಕ್ಕಾಗಿ ಕಾರ್ಖಾನೆಗೆ ಕಬ್ಬು ಪೂರೈಕೆ ಆಗುತ್ತೆ. ಏನ್ ಲಾಭ ಅಂತಾ ಕೇಳಿದರಲ್ಲ ಕಾರ್ಖಾನೆಗಳಿಗೆ, ಇದು ಲಾಭ. ಇಡೀ ದೇಶದಲ್ಲಿ ರೈತನಿಗೆ ನೀರಿನ ಬರ ಆಗದ ರೀತಿ ನೀರು ಕೊಡುವ ಸರ್ಕಾರ ಅಂದ್ರೆ ಅದು ಕರ್ನಾಟಕ ಸರ್ಕಾರ. ಪಂಪ್‌ಸೆಟ್‌ಗಳಿಗೆ ಹತ್ತು ಪೈಸೆ ಬಿಲ್ ಪಡೆಯಲ್ಲ. ವರ್ಷಕ್ಕೆ ಸಾವಿರಾರು ಕೋಟಿ ಬಿಲ್ ಸರ್ಕಾರವೇ ಕಟ್ಟುತ್ತೆ. ಇದರ ಉದ್ದೇಶ ಉದ್ಯೋಗ ಸೃಷ್ಟಿಯಾಗಲಿ, ರೈತ 12 ತಿಂಗಳು ಹೊಲದಲ್ಲಿ ಕೆಲಸ ಮಾಡಿ, ಲಾಭ ಮಾಡಿಕೊಳ್ಳಲಿ ಎಂಬುದು ನಮ್ಮ ಉದ್ದೇಶ ಎಂದರು.