ಚಿಕ್ಕೋಡಿ :ನೆರೆ ಹಾವಳಿಯಿಂದ ಅಳಿದುಳಿದ ಕಬ್ಬಿನ ಬೆಳೆಗೆ ಈಗ ಸೂಲಂಗಿ ಬಂದಿದ್ದು, ಕಬ್ಬು ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕೃಷ್ಣಾ ನದಿ ತೀರದ ಕಬ್ಬು ಬೆಳೆಗಾರರಿಗೆ ತಲೆನೋವಾದ 'ಸೂಲಂಗಿ'
ಚಿಕ್ಕೋಡಿ ಭಾಗದಲ್ಲಿ ಕಬ್ಬಿನ ಬೆಳೆ ಜೊತೆ ಸೂಲಂಗಿ ಬೆಳೆಯುತ್ತಿರುವುದರಿಂದ ಕಬ್ಬು ಬೆಂಡು ಒಡೆಯುತ್ತಿದ್ದು, ಇಳುವರಿ ಹಾಗೂ ತೂಕದಲ್ಲಿ ಕಡಿಮೆ ಆಗುತ್ತಿದೆ. ಇದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಜೊತೆಗೆ ಈ ವರ್ಷಪೂರ್ತಿ ಗಡಿ ಭಾಗದ ರೈತರು ಬೆಳೆದ ಬೆಳೆಗಳೆಲ್ಲವೂ ಹಾಳಾಗಿದ್ದು, ಕಬ್ಬು ಬೆಳೆ ಕಟಾವು ಘಟ್ಟಕ್ಕೆ ಬಂದರೂ ಸಹಿತ ಕಾರ್ಖಾನೆ ಮಾಲೀಕರು ಒಯ್ಯುತ್ತಿಲ್ಲ.
ಕಬ್ಬು ನಾಟಿ ಮಾಡಿದ 11 ತಿಂಗಳ ಬಳಿಕ ಸೂಲಂಗಿ ಬರುತ್ತದೆ. ಆದರೆ, ಈ ಬಾರಿ 5 ರಿಂದ 8 ತಿಂಗಳ ಅವಧಿಯಲ್ಲೇ ಸೂಲಂಗಿ ಮೂಡಿದೆ. ಸೂಲಂಗಿ ಕಾಣಿಸಿಕೊಳ್ಳಲಾರಂಭಿಸಿದರೆ ಆದಷ್ಟು ಬೇಗ ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಕಳುಹಿಸಬೇಕು. ತಡ ಮಾಡಿದಷ್ಟೂ ಕಬ್ಬು ಬೆಂಡೊಡೆಯಲಾರಂಭಿಸುತ್ತದೆ. ಸಾಮಾನ್ಯವಾಗಿ ಒಂದು ಎಕರೆಗೆ 50 ರಿಂದ 60 ಟನ್ ಕಬ್ಬಿಣ ಫಸಲು ಸಿಗುತ್ತಿದ್ದರೆ, ಸೂಲಂಗಿ ಬಂದಾಗ 30 ರಿಂದ 40 ಟನ್ ಮಾತ್ರ ಸಿಗಬಹುದು ಅಷ್ಟೆ ಅಂತಾರೆ ರೈತರು.
ಇದನ್ನೂ ಓದಿ:ಮೈಸೂರಿನಲ್ಲಿ ಕಾರು - ಬೈಕ್ ನಡುವೆ ಭೀಕರ ಅಪಘಾತ: ಒಂದೇ ಕುಟುಂಬದ ಮೂವರು ಸಾವು
ಸೂಲಂಗಿ ಕಬ್ಬು ಕಟಾವಿಗೆ ಕಾರ್ಮಿಕರು ಹೆಚ್ಚಿನ ಕೂಲಿ ಕೇಳುತ್ತಾರೆ. ಇದು ಕೂಡ ರೈತರಿಗೆ ಆರ್ಥಿಕ ಹೊರೆ ಹೆಚ್ಚಿಸುತ್ತದೆ. ಸೂಲಂಗಿ ಕಬ್ಬು ಮೇವಿಗೂ ಬರುವುದಿಲ್ಲ. ಸೂಲಂಗಿಗೆ ಬಿಸಿಲಿನ ತಾಪಕ್ಕೆ ಬೆಂಕಿ ಹೊತ್ತುತ್ತದೆ. ಇದರಿಂದ ಕಬ್ಬಿನ ಬೆಳೆಗೆ ಬೆಂಕಿ ತಗುಲುವುದರಿಂದ ಕಬ್ಬು ಬೆಂಕಿಗಾಹುತಿ ಆಗುವ ಸಾಧ್ಯತೆ ಹೆಚ್ಚು.
ವಿಶೇಷವಾಗಿ ಅಡಸಾಲಿ (ಮುಂಚಿತವಾಗಿ) ನಾಟಿ ಮಾಡಿದ ಕಬ್ಬಿಗೆ ಡಿಸೆಂಬರ್ ಅಂತ್ಯದೊಳಗೆ ಹೂವು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ, ಈ ವರ್ಷ ಅಡಸಾಲಿ ಮತ್ತು ಇಕ್ಕಸಾಲಿ(ನಂತರದ ಅವಧಿಯಲ್ಲಿ) ನಾಟಿ ಮಾಡಿದ ಕಬ್ಬಿನಲ್ಲೂ ಸೂಲಂಗಿ ಹೂ ಕಾಣಿಸಿಕೊಂಡಿದೆ. ಕುಳೆ ಕಬ್ಬಲ್ಲೂ ಈ ಬಾರಿ ಡಿಸೆಂಬರ್ನಲ್ಲೇ ಹೂ ಬಿಟ್ಟಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
ಈ ಬಾರಿ ಕಬ್ಬು ಬೆಳೆಯನ್ನು ಕಷ್ಟಪಟ್ಟು ಉಳಿಸಿಕೊಂಡು ಬಂದರೂ ಕೊನೇ ಘಳಿಗೆಯಲ್ಲಿ ಕೈಗೆ ಸಿಕ್ಕ ತುತ್ತು ಬಾಯಿಗೆ ಬರಲಾಗದ ಸ್ಥಿತಿಗೆ ಬಂದೊದಗಿದೆ. ಅಲ್ಲದೇ ಕಾರ್ಖಾನೆಯವರು ಕಬ್ಬಿನ ಬೆಳೆಗಳಿಗೆ ಸಂಪೂರ್ಣ ರಿಕವರಿ ಬಂದಿಲ್ಲ, ನಾವು ಕಬ್ಬು ಕಟಾವು ಮಾಡಲೂ ಸಾಧ್ಯವಿಲ್ಲ ಅನ್ನುತ್ತಿರುವುದು ರೈತರನ್ನು ಮತ್ತಷ್ಟು ಕಂಗೆಡಿಸಿದೆ.