ಬೆಳಗಾವಿ : ರಾಜ್ಯದಲ್ಲಿ ಲಿಂಗಾಯತ ನಾಯಕರಿಗೆ ಅನ್ಯಾಯ ಮಾಡಿದ್ದರಿಂದ ಪಕ್ಷ ಬಿಟ್ಟು ಹೋಗುತ್ತಿದ್ದಾರೆ ಎಂಬುದು ಸುಳ್ಳು. ಎಲ್ಲ ಸಮುದಾಯಗಳಿಗೂ ಬಿಜೆಪಿ ಅವಕಾಶ ನೀಡಿದೆ. ಲಿಂಗಾಯತ ಸಮುದಾಯದ ದೊಡ್ಡ ನಾಯಕರ ಪಡೆಯೇ ನಮ್ಮಲ್ಲಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ, ರಾಜ್ಯಸಭಾ ಸದಸ್ಯ ಸುಧಾಂಶು ತ್ರಿವೇದಿ ಹೇಳಿದರು.
ಬೆಳಗಾವಿ ವಿಭಾಗದ ಬಿಜೆಪಿ ಮಾಧ್ಯಮ ಕೇಂದ್ರವನ್ನು (ಬೆಳಗಾವಿ, ಚಿಕ್ಕೋಡಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆ) ಇಂದು ಉದ್ಘಾಟಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ದೊಡ್ಡ ಪಕ್ಷದಲ್ಲಿ ಕೆಲವು ಬದಲಾವಣೆಗಳು ಅನಿವಾರ್ಯವಾಗುತ್ತವೆ. ಅವುಗಳನ್ನು ಒಪ್ಪಿಕೊಂಡು ಪಕ್ಷ ಮುನ್ನಡೆಯುತ್ತದೆ. ಬೇಸತ್ತು ಬಿಜೆಪಿ ಬಿಟ್ಟು ಹೋದವರು ಯಾರೂ ದೊಡ್ಡವರಾದ ಉದಾಹರಣೆ ಇಲ್ಲ ಎಂದರು. ಈ ಮೂಲಕ ಪಕ್ಷ ಬಿಟ್ಟು ಹೋಗಿರುವ ಮಾಜಿ ಸಿಎಂ ಜಗದೀಶ ಶೆಟ್ಟರ್ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ತಿರುಗೇಟು ಕೊಟ್ಟರು.
ಒಂದೆಡೆ ದೇಶದ ಸುರಕ್ಷತೆ, ಇನ್ನೊಂದೆಡೆ ಜನ ಕಲ್ಯಾಣ. ಈ ಎರಡೂ ಸೂತ್ರಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅತ್ಯಂತ ಪರಿಣಾಮಕಾರಿಯಾಗಿ ನಿಭಾಯಿಸುತ್ತಿದ್ದಾರೆ. ಅವರ ಆಶಯದಂತೆ ರಾಜ್ಯದಲ್ಲಿ ಕೂಡ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದೆ. ನಮ್ಮ ಕೆಲಸಗಳ ಕಾರಣದಿಂದಲೇ ಈ ಬಾರಿ ಮತ್ತೆ ಪಕ್ಷ ಸಂಪೂರ್ಣ ಬಹುಮತ ಪಡೆಯಲಿದೆ ಎಂದು ಸುಧಾಂಶು ತ್ರಿವೇದಿ ವಿಶ್ವಾಸ ವ್ಯಕ್ತಪಡಿಸಿದರು.