ಬೆಳಗಾವಿ: ಇಂದು ವಿಶ್ವ ಪರಿಸರ ದಿನ. ಉಸಿರಾಡಲು ಶುದ್ಧ ಗಾಳಿಯನ್ನು ನೀಡುವ ಮರಗಳನ್ನು ವರ್ಷಕ್ಕೊಮ್ಮೆ ಪರಿಸರ ದಿನದಂದು ಮಾತ್ರ ನೆನಪು ಮಾಡಿಕೊಳ್ಳುವ ಪರಿಸ್ಥಿತಿ ಇದೆ. ಆದರೆ, ಮರಗಳನ್ನು ಕೇವಲ ನೆನಪು ಮಾಡಿಕೊಂಡರೆ ಸಾಲದು. ಅವುಗಳನ್ನು ಉಳಿಸಿ, ಬೆಳೆಸುವತ್ತ ಗಮನಹರಿಸಬೇಕಿದೆ.
ಆಧುನೀಕರಣ ಹಾಗೂ ಹೆಚ್ಚುತ್ತಿರುವ ಜನಸಂಖ್ಯೆಯ ಪರಿಣಾಮದಿಂದ ಅರಣ್ಯ ನಾಶವಾಗುತ್ತಿದೆ. ಇದರಿಂದ ಹಲವು ದುಷ್ಪರಿಣಾಮಗಳು ಎದುರಾಗುತ್ತಿದೆ. ಈ ನಡುವೆ ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ವ್ಯಕ್ತಿಯೊಬ್ಬರು ನೆಲವನ್ನು ಹಚ್ಚ ಹಸಿರಾಗಿಸುವ ಧ್ಯೇಯವೊಂದರಲ್ಲಿ ತೊಡಗಿಸಿಕೊಂಡಿದ್ದು, ಇತರರಿಗೆ ಮಾದರಿಯಾಗಿದ್ದಾರೆ.
ಖಾದಿ ಅಂಗಿ - ಚಡ್ಡಿ, ತಲೆಗೆ ಗಾಂಧಿ ಟೋಪಿ, ಕುರಚಲು ಗಡ್ಡ, ಬಗಲಲ್ಲಿ ಬಟ್ಟೆ ಚೀಲ ಹಾಕಿಕೊಂಡು ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಾ, ಪರಿಸರ ಕುರಿತು ಕೇವಲ ಭಾಷಣ ಮಾಡದೇ ಹಸಿರು ಮತ್ತು ಜಲ ಕ್ರಾಂತಿ ಮಾಡಿದ ಓರ್ವ ಯಶಸ್ವಿ ಸಾಧಕನ ಕಥೆಯಿದು. ಹೌದು. ಹೀಗೆ ಮರಗಳ ಮಧ್ಯ ನಿಂತಿರುವ ಇವರ ಹೆಸರು ಶಿವಾಜಿ ಛತ್ರಪ್ಪ ಕಾಗಣಿಕರ್. ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದವರು. 1972ರಲ್ಲಿ ಮನೆ ಬಿಟ್ಟ ಇವರು ಒಬ್ಬ ಅಪ್ಪಟ ಗಾಂಧಿವಾದಿ, ಪರಿಸರವಾದಿ, ಶಿಕ್ಷಕ ಹಾಗೂ ಹೋರಾಟಗಾರ. ಬರಿಗಾಲ ಫಕೀರನಂತೆ ಕಾಣುವ ಇವರ ಪರಿಸರ ಮತ್ತು ಜಲ ಕ್ರಾಂತಿ ಕಟ್ಟಣಭಾವಿ, ಬಂಬರಗಾ, ಇದ್ದಿಲಹೊಂಡ, ಗುರಾಮಟ್ಟಿ, ದೇವಗಿರಿ ಸೇರಿ ಸುತ್ತಮುತ್ತಲಿನ ಬೋಳು ಬೆಟ್ಟ, ಗುಡ್ಡ, ಹೊಲ ಗದ್ದೆಗಳನ್ನು ಹಚ್ಚ ಹಸಿರಾಗಿಸಿದೆ. ದಕ್ಷಿಣ ಕರ್ನಾಟಕದಲ್ಲಿ ಸಾಲು ಮರದ ತಿಮ್ಮಕ್ಕ ವೃಕ್ಷಕ್ರಾಂತಿ ಮಾಡಿದಂತೆ ಉತ್ತರ ಕರ್ನಾಟಕದಲ್ಲಿ ಈ ಶಿವಾಜಿ ಕಾಣಿಕರ್ ಅದೇ ದಾರಿಯಲ್ಲಿ ಸಾಗುತ್ತಿದ್ದಾರೆ.
ಸಸಿಗಳನ್ನು ವಿತರಿಸಿ ಪರಿಸರ ಜಾಗೃತಿ: 74 ವರ್ಷದ ಶಿವಾಜಿ ಕಾಗಣಿಕರ್ ಒಂದು ಊರಿನಿಂದ ಮತ್ತೊಂದು ಊರಿಗೆ, ಆ ಹೊಲದಿಂದ ಮತ್ತೊಂದು ಹೊಲಕ್ಕೆ ಸಂಚರಿಸುತ್ತ ತಾವು ನೆಟ್ಟ ಗಿಡಗಳನ್ನು ವೀಕ್ಷಿಸುತ್ತಾರೆ. ಸಾದಾ - ಸೀದಾ ಹಳ್ಳಿ ಹೈದನಾಗಿರುವ ಅವರು ಯಾವುದೇ ಪ್ರಚಾರ ಮತ್ತು ಫಲಾಪೇಕ್ಷೆ ಬಯಸದೇ ತಮ್ಮ ಕೆಲಸದ ಮೂಲಕವೇ ಸದ್ದು ಮಾಡುತ್ತಿದ್ದಾರೆ.
1984ರಲ್ಲಿ ಮೊದಲ ಬಾರಿ ಹಂದಿಗನೂರ ಪ್ರೌಢಶಾಲೆ ಆವರಣದಲ್ಲಿ ಗಿಡ ನೆಡುವ ಮೂಲಕ ಆರಂಭವಾದ ಇವರ ಪರಿಸರ ಕಾಯಕ ನಂತರ ಬಂಬರಗಾ ಶಾಲೆ, ದೇವಗಿರಿಯ ಗಾಂಧಿಘರ ಸೇರಿ ಮತ್ತಿತರ ಕಡೆ ಮುಂದುವರೆಯಿತು. ಇದೇ ವೇಳೆ ಅರಣ್ಯ ಇಲಾಖೆಯಿಂದ 5 ಸಾವಿರ ಸಸಿ ತರಿಸಿ ವಿದ್ಯಾರ್ಥಿಗಳಿಗೆ ವಿತರಿಸಿದ್ದರು. ಹೀಗೆ ಸುತ್ತಲಿನ ಶಾಲೆಗಳ ವಿದ್ಯಾರ್ಥಿಗಳಿಗೂ ಸಸಿಗಳನ್ನು ವಿತರಿಸಿ ಜಾಗೃತಿ ಮೂಡಿಸಿದ್ದರು.
'ದೀನಬಂಧು' ಎಂಬ ಸರಳ ಗೋಬರ್ ಘಟಕ:ಅಡುಗೆಗೆ ಕಟ್ಟಿಗೆಗಳನ್ನು ಬಳಕೆ ಮಾಡುತ್ತಿದ್ದರಿಂದ ಕಾಡು ನಾಶವಾಗುತ್ತಿತ್ತು. ಅಲ್ಲದೇ ಮಹಿಳೆಯರು ವಿವಿಧ ಕಾಯಿಲೆಗಳಿಂದ ಬಳಲುವಂತಾಗುತ್ತಿತ್ತು. ಇದನ್ನರಿತ ಶಿವಾಜಿ ಅವರು, ಹೊಗೆ ರಹಿತ ಒಲೆಗೆ ಗೋಬರ್ ಗ್ಯಾಸ್ ಉತ್ತಮ ಪರಿಹಾರವೆಂದು ಈ ಭಾಗದಲ್ಲಿ ಜಾಗೃತಿ ಮೂಡಿಸಿದರು. ಎನ್‌ಜಿಒ ಜತೆ ಒಡಬಂಡಿಕೆ ಮಾಡಿಕೊಂಡು 'ದೀನಬಂಧು' ಎಂಬ ಸರಳ ಗೋಬರ್ ಘಟಕಗಳನ್ನು 14 ಸಾವಿರಕ್ಕೂ ಹೆಚ್ಚಿನ ಜನರಿಗೆ ತಲುಪಿಸಿ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ದೊಡ್ಡ ಕೆಲಸ ಮಾಡಿದ್ದಾರೆ. ಅಲ್ಲದೇ ಉದ್ಯೋಗ ಖಾತ್ರಿ ಯೋಜನೆಯನ್ನು ಕೂಲಿ ಕಾರ್ಮಿಕರ ಚಳವಳಿಯನ್ನಾಗಿಸಿ ಜಾಗೃತಿ ಮೂಡಿಸುತ್ತಿದ್ದಾರೆ.