ಕರ್ನಾಟಕ

karnataka

ETV Bharat / state

ಚಿಕ್ಕೋಡಿ: ಹಲ್ಲಿ ಬಿದ್ದ ಹಾಲು ಸೇವಿಸಿ 26 ವಿದ್ಯಾರ್ಥಿಗಳು ಅಸ್ವಸ್ಥ - ವಿದ್ಯಾರ್ಥಿಗಳು ಅಸ್ವಸ್ಥ

ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಾಲು ಸೇವಿಸಿದ 26 ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ನಡೆದಿದೆ.

ಹುಕ್ಕೇರಿ
ಹುಕ್ಕೇರಿ

By ETV Bharat Karnataka Team

Published : Jan 11, 2024, 4:34 PM IST

Updated : Jan 11, 2024, 6:46 PM IST

ಚಿಕ್ಕೋಡಿ : ಕ್ಷೀರಭಾಗ್ಯದ ಹಾಲಿನಲ್ಲಿ ಹಲ್ಲಿ ಬಿದ್ದು ಉಳ್ಳಾಗಡ್ಡಿ ಖಾನಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ 26 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕ್ಷೀರ ಭಾಗ್ಯ ಹಾಲು ಸೇವಿಸಿದ 26 ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಹಿನ್ನೆಲೆ, ಸ್ಥಳೀಯ ಸಂಕೇಶ್ವರ ಸಮುದಾಯದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಉಳ್ಳಾಗಡ್ಡಿ ಖಾನಾಪುರ ಗ್ರಾಮದಲ್ಲಿ ಒಂದೇ ಕ್ಯಾಂಪಸ್​ನಲ್ಲಿ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಉರ್ದು ಶಾಲೆಗಳಿವೆ. ಒಟ್ಟು 540 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವತ್ತು ಕೂಡ ಎಂದಿನಂತೆಯೇ NGO ಮುಖಾಂತರ ಶಾಲೆಗೆ ಹಾಲು ಸರಬರಾಜು ಮಾಡಲಾಗಿತ್ತು. ವಿದ್ಯಾರ್ಥಿಗಳು ಹಾಲು ಸೇವನೆಗೆ ಸಾಲುಗಟ್ಟಿ ನಿಂತಿದ್ದ ಸಂದರ್ಭದಲ್ಲಿ ಒಂದು ಕ್ಯಾನಿನಲ್ಲಿ ಹಲ್ಲಿ ಕಾಣಿಸಿಕೊಂಡಿದೆ.

ಅಷ್ಟರಲ್ಲಿ 40 ವಿದ್ಯಾರ್ಥಿಗಳು ಹಾಲು ಸೇವನೆ ಮಾಡಿದ್ದರು. ಹಲ್ಲಿ ಕಾಣಿಸಿಕೊಂಡ ಹಿನ್ನೆಲೆ ವಿದ್ಯಾರ್ಥಿಗಳಿಗೆ ಹಾಲು ಕೊಡುವುದನ್ನು ನಿಲ್ಲಿಸಲಾಗಿದೆ. ಅಷ್ಟರಲ್ಲಿ ಕೆಲವು ಮಕ್ಕಳಲ್ಲಿ ವಾಂತಿ ಕಾಣಿಸಿಕೊಂಡ ಹಿನ್ನೆಲೆ ಎರಡು ಆಂಬ್ಯುಲೆನ್ಸ್​ಗಳ ಮುಖಾಂತರ ಸಮೀಪದ ಸಂಕೇಶ್ವರ ಸರ್ಕಾರ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಒಟ್ಟು 26 ವಿದ್ಯಾರ್ಥಿಗಳಲ್ಲಿ ಆರೋಗ್ಯದಲ್ಲಿ ಏರುಪೇರಾಗಿದೆ. ಸದ್ಯ ಚಿಕಿತ್ಸೆ ನಂತರ ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಆಸ್ಪತ್ರೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪ್ರಭಾವತಿ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.

ಘಟನೆ ಬಗ್ಗೆ ಕ್ಷೇತ್ರಶಿಕ್ಷಣಾಧಿಕಾರಿ ಹೇಳಿದ್ದಿಷ್ಟು:ಈ ವಿಷಯಕ್ಕೆ ಸಂಬಂಧಿಸಿದಂತೆ ಈಟಿವಿ ಭಾರತ ದೂರವಾಣಿ ಮುಖಾಂತರ ಹುಕ್ಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, 40 ವಿದ್ಯಾರ್ಥಿಗಳು ಇವತ್ತು ಕ್ಷೀರ ಭಾಗ್ಯದ ಹಾಲು ಸೇವನೆ ಮಾಡಿದ್ದರು. ಇದರಲ್ಲಿ 26 ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರು ಪೇರು ಕಂಡು ಬಂದ ಹಿನ್ನೆಲೆ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎಲ್ಲರ ಆರೋಗ್ಯದಲ್ಲಿಯೂ ಚೇತರಿಕೆ ಕಂಡು ಬಂದಿದೆ ಎಂದು ಮಾಹಿತಿ ನೀಡಿದರು.

ಉಪಹಾರ ಸೇವಿಸಿದ 12 ವಿದ್ಯಾರ್ಥಿಗಳು ಅಸ್ವಸ್ಥ (ಪ್ರತ್ಯೇಕ ಘಟನೆ) : ಉಪಹಾರ ಸೇವಿಸಿದ 12 ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಚನ್ನಗಿರಿ ತಾಲೂಕಿನ ಕಾಕನೂರು ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ (ನವೆಂಬರ್- 28-23) ನಡೆದಿತ್ತು. ಅಸ್ವಸ್ಥರಾದ ವಿದ್ಯಾರ್ಥಿಗಳನ್ನು ಮೊದಲು ಶಾಲಾ ಸಿಬ್ಬಂದಿ ಸಂತೇಬೆನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಚಿಗಟೇರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

ಇದನ್ನೂ ಓದಿ:ದಾವಣಗೆರೆ: ವಸತಿ ಶಾಲೆಯಲ್ಲಿ ಉಪಹಾರ ಸೇವಿಸಿದ 12 ವಿದ್ಯಾರ್ಥಿಗಳು ಅಸ್ವಸ್ಥ

Last Updated : Jan 11, 2024, 6:46 PM IST

ABOUT THE AUTHOR

...view details