ಚಿಕ್ಕೋಡಿ(ಬೆಳಗಾವಿ): ಚಿಕ್ಕೋಡಿ ಪುರಸಭೆ ಅಧಿಕಾರಿಗಳು ಬೇಜವಾಬ್ದಾರಿತನದಿಂದ ಶಾಲೆಗೆ ಮೀಸಲಿಟ್ಟ ಸ್ಥಳದಲ್ಲಿ ಸಮುದಾಯ ಭವನ ಕಟ್ಟುವುದಕ್ಕೆ ಆದೇಶ ನೀಡುತ್ತಿದ್ದಂತೆ ವಿದ್ಯಾರ್ಥಿಗಳು, ಎಸ್ಡಿಎಂಸಿ ಸದಸ್ಯರು ಪುರಸಭೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕೋಡಿ ಪಟ್ಟಣದ ಓತಾರಿ ಗಲ್ಲಿಯಲ್ಲಿರುವ ವೆಂಕಟೇಶ್ವರ ಮಂದಿರ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಚಿಕ್ಕೋಡಿ ಪುರಸಭೆಯಿಂದ 4 ಗುಂಟೆ ಜಾಗವನ್ನು ಘಾಲೆ ಗಲ್ಲಿಯಲ್ಲಿ ಮೀಸಲು ಇಡಲಾಗಿದೆ. ಈಗ ಅದೇ ಜಾಗದಲ್ಲಿ ಶಾಲಾ ಕಟ್ಟಡಕ್ಕೆಂದು ಶಿಕ್ಷಣ ಇಲಾಖೆಯು 10 ಲಕ್ಷ ರೂಪಾಯಿ ಮಂಜೂರು ಮಾಡಿದೆ.
ಶಾಲೆಗೆ ಬರುವ ಬಹುತೇಕ ಮಕ್ಕಳು ಬಡ ಕುಟುಂಬದವರಾಗಿದ್ದು, ವಿದ್ಯಾರ್ಥಿಗಳಿಗೆ ಅನುಕೂಲ ಆಗಲೆಂದು ಎರಡು ಕೊಠಡಿಗಳನ್ನು ಕಟ್ಟಲು ತುರ್ತಾಗಿ ಅನುಮೋದನೆ ನೀಡಿತ್ತು. ಇನ್ನೇನು ಕಟ್ಟಡದ ಕೆಲಸ ಪ್ರಾರಂಭ ಮಾಡಬೇಕೆನ್ನುವಷ್ಟರಲ್ಲಿ ಬೇರೊಂದು ಸಮುದಾಯದ ಜನ ಬಂದು, ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಈ ಜಾಗವನ್ನು ಪುರಸಭೆ ನಮ್ಮ ಸಮುದಾಯಕ್ಕೆ ಭವನ ನಿರ್ಮಿಸಲು ನೀಡಿದೆ, ಇದು ನಮ್ಮ ಜಾಗ ಎಂದು ತಮ್ಮ ಬೋರ್ಡ್ ಹಾಕಿದ್ದಾರೆ. ಇದರಿಂದ ದಿಕ್ಕು ತೋಚದ ವಿದ್ಯಾರ್ಥಿಗಳು ಹಾಗೂ ಶಾಲಾ ಆಡಳಿತ ಮಂಡಳಿ ಸದಸ್ಯರು ಪುರಸಭೆ ವಿರುದ್ಧ ಪ್ರತಿಭಟನೆ ನಡೆಸಿದರು.