ಅಥಣಿ : ಕೊರೊನಾ ಪರೀಕ್ಷೆ ಮಾಡುತ್ತಿಲ್ಲ ಎಂದು ಆರೋಪಿಸಿ ಅಥಣಿ ಸಮುದಾಯ ಆಸ್ಪತ್ರೆ ಮುಂಭಾಗ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಕಾಲೇಜಿಗೆ ಹೋಗುವಾಗ ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿ ಕೊಂಡೊಯ್ಯಬೇಕೆಂಬ ನಿಯಮವಿದೆ. ತಾಲೂಕು ಸರ್ಕಾರಿ ಆಸ್ಪತ್ರೆಗೆ ಕಳೆದ ಒಂದು ವಾರದಿಂದ ಅಲೆದಾಡಿದರೂ, ಕೋವಿಡ್ ಪರಿಕ್ಷೆ ಮಾಡುತ್ತಿಲ್ಲ. ಹೀಗಾಗಿ, ಕಾಲೇಜಿಗೆ ಹೋಗಲು ತೊಂದರೆಯಾಗುತ್ತಿದೆ ಎಂದು ವೈದ್ಯರ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಅಥಣಿ ಪೊಲೀಸರು ಆಗಮಿಸಿ ವಿದ್ಯಾರ್ಥಿಗಳ ಮನವೊಲಿಸಿದರು.
ಅಥಣಿ ತಾಲೂಕು ಆಸ್ಪತ್ರೆ ಮುಂದೆ ಪ್ರತಿಭಟಿಸಿದ ವಿದ್ಯಾರ್ಥಿಗಳು ಓದಿ : ಗೋಕಾಕ್ ತಾಲೂಕನ್ನು ಜಿಲ್ಲೆ ಮಾಡಲು ತಕರಾರಿಲ್ಲ: ಸತೀಶ್ ಜಾರಕಿಹೊಳಿ
ಈ ವೇಳೆ ಮಾತನಾಡಿದ ತಾಲೂಕು ವೈದ್ಯಾಧಿಕಾರಿ ಸಿ.ಎಸ್ ಪಾಟೀಲ್, ಶಾಲೆ- ಕಾಲೇಜು ಪುನರಾರಂಭವಾದ ಹಿನ್ನೆಲೆ ಜಿಲ್ಲೆಯಲ್ಲಿ ಸ್ವ್ಯಾಬ್ ಕಲೆಕ್ಟ್ ಹೆಚ್ಚಾಗಿದೆ. ಹೀಗಾಗಿ, ವರದಿ ನೀಡಲು ವಿಳಂಬವಾಗುತ್ತಿದೆ. ಮೇಲಾಧಿಕಾರಿಗಳ ಆದೇಶದಂತೆ ಸದ್ಯ ಸ್ವ್ಯಾಬ್ ತೆಗೆದುಕೊಳ್ಳುತ್ತಿಲ್ಲ, ತುರ್ತು ಸಂದರ್ಭ ಇದ್ದರೆ ಮಾತ್ರ ಕೋವಿಡ್ ಪರೀಕ್ಷೆ ಮಾಡುತ್ತಿದ್ದೇವೆ. ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ಇದ್ದು, ಮೇಲಾಧಿಕಾರಿಗಳು ನಮಗೆ ಸೂಚನೆ ನೀಡಲಿದ್ದಾರೆ, ಬಳಿಕ ಸ್ವ್ಯಾಬ್ ಕಲೆಕ್ಟ್ ಮಾಡಲಾಗುವುದು. ಅಲ್ಲಿಯವರೆಗೆ ಸಹಕರಿಸಿ ಎಂದರು. ವೈದ್ಯಾಧಿಕಾರಿಗಳ ಭರವಸೆಯ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ವಾಪಸ್ ಪಡೆದರು.