ಚಿಕ್ಕೋಡಿ: ಕೊರೊನಾ ಮಹಾಮಾರಿಯಿಂದ ಕಾಲೇಜುಗಳು ಬಂದ್ ಆಗಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಕಾಲೇಜುಗಳನ್ನು ಕಳೆದ ಎರಡು ದಿನಗಳ ಹಿಂದೆ ಮತ್ತೆ ಪ್ರಾರಂಭಿಸಲಾಗಿತ್ತು. ಆದರೆ, ಚಿಕ್ಕೋಡಿ ಇಂಜಿನಿಯರಿಂಗ್ ಕಾಲೇಜಿಗೆ ವಿದ್ಯಾರ್ಥಿಗಳು ಆಗಮಿಸದ ಹಿನ್ನೆಲೆಯಲ್ಲಿ ಶಿಕ್ಷಕರು ಆನ್‌ಲೈನ್ ಕ್ಲಾಸ್ ಮುಂದುವರೆಸಿದ್ದಾರೆ.
ಕಾಲೇಜಿಗೆ ಬಾರದ ವಿದ್ಯಾರ್ಥಿಗಳು: ಮುಂದುವರಿದ ಆನ್‌ಲೈನ್ ಕ್ಲಾಸ್ - ಆನ್‌ಲೈನ್ ತರಗತಿ ಸಂಬಂಧಿತ ಸುದ್ದಿ
ಕೊರೊನಾ ಪ್ರಚೋದಿತ ಲಾಕ್ಡೌನ್ನಿಂದ ಬಂದ್ ಆಗಿದ್ದ ಶಿಕ್ಷಣ ಸಂಸ್ಥೆಗಳು ಇದೀಗ ಮತ್ತೆ ಶುರುವಾಗಿದೆ. ಆದರೆ, ವಿದ್ಯಾರ್ಥಿಗಳು ಮಾತ್ರ ಕಾಲೇಜು ಕಡೆ ಮುಖ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಚಿಕ್ಕೋಡಿ ಇಂಜಿನಿಯರಿಂಗ್ ಕಾಲೇಜಿನ ಶಿಕ್ಷಕರು ಆನ್‌ಲೈನ್ ಕ್ಲಾಸ್ ಮುಂದುವರೆಸಿದ್ದಾರೆ.
ಕಳೆದೆರಡು ದಿನಗಳಿಂದ ಕಾಲೇಜಿಗೆ ಬರಲು ವಿದ್ಯಾರ್ಥಿಗಳು ಆಸಕ್ತಿ ತೋರಿಸುತ್ತಿಲ್ಲ. ಚಿಕ್ಕೋಡಿಯ ಬಿಕೆ ಕಾಲೇಜು, ಕೆಎಲ್ಇ ಕಾಲೇಜು, ಎಎ ಪಾಟೀಲ್ ಮಹಿಳಾ ಕಾಲೇಜು ಸೇರಿದಂತೆ ಬಹುತೇಕ ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರದೆ ಖಾಲಿ ಖಾಲಿಯಾಗಿದೆ. ಅಂತಿಮವಾಗಿ, ಶಿಕ್ಷಕರು ಮತ್ತೆ ಆನ್‌ಲೈನ್ ಕ್ಲಾಸ್ಗಳ ಮುಖಾಂತರ ವಿದ್ಯಾರ್ಥಿಗಳು ಪಾಠ ಬೋಧನೆ ಮಾಡುತ್ತಿದ್ದಾರೆ.
ವಿದ್ಯಾರ್ಥಿಗಳು ಕಾಲೇಜಿಗೆ ಬರುವಾಗ ಕೋವಿಡ್ ಪರೀಕ್ಷೆ ವರದಿ ಹಾಗೂ ಪಾಲಕರ ಅನುಮತಿ ಪತ್ರ ತರುವಂತೆ ಸೂಚನೆ ನೀಡಲಾಗಿತ್ತು. ಆದರೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕೋವಿಡ್ ತಪಾಸಣೆ ನಡೆಸಲು ತೊಂದರೆಯಾಗುತ್ತಿದೆ. ಇನ್ನೊಂದು ಕಡೆ ಪಾಲಕರು ಭಯದಿಂದ ಮಕ್ಕಳನ್ನು ಕಾಲೇಜಿಗೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಕಾಲೇಜು ಆಡಳಿತ ಮಂಡಳಿ ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ವಾಟ್ಸ್ಆ್ಯಪ್ ಮತ್ತು ಫೋನ್ ಕರೆ ಮೂಲಕ ತರಗತಿಗೆ ಹಾಜರಾಗಲು ಸೂಚನೆ ನೀಡಿದ್ದಾರೆ ಎಂದು ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಪ್ರಸಾದ್ ರಾಂಪೂರೆ ಹೇಳಿದ್ದಾರೆ.