ಗ್ರಾಮದ ಚಿತ್ರಣ ಬದಲಿಸಿದ ಶಿಕ್ಷಕ.. ವರ್ಗಾವಣೆಗೊಂಡಾಗ ಊರಿಗೆ ಊರೇ ಕಣ್ಣೀರು.. ಚಿಕ್ಕೋಡಿ (ಬೆಳಗಾವಿ):ಪಾಠ ಮಾಡಿದ ಪ್ರೀತಿಯ ಶಿಕ್ಷಕರೊಬ್ಬರು ವರ್ಗಾವಣೆಯಾಗಿ, ಅವರ ಸ್ವಗ್ರಾಮಕ್ಕೆ ತೆರಳುವ ವೇಳೆ ವಿದ್ಯಾರ್ಥಿಗಳು ಹಾಗೂ ತೀರ್ಥ ಗ್ರಾಮಸ್ಥರು ಕಣ್ಣೀರ ವಿದಾಯ ಹೇಳಿ ಬೀಳ್ಕೊಟ್ಟ ಭಾವನಾತ್ಮಕ ಘಟನೆಗೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೀರ್ಥ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಸಾಕ್ಷಿಯಾಯಿತು.
ತೀರ್ಥ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 18 ವರ್ಷಗಳಿಂದ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿದ ಶಿಕ್ಷಕ ಅರುಣ್ ಕುಮಾರ್ ಶೆಟ್ಟಿ ಅವರು ತಮ್ಮ ಉಡುಪಿ ಜಿಲ್ಲೆಯ ಬೈಂದೂರು ಗ್ರಾಮದ ಶಾಲೆಗೆ ವರ್ಗಾವಣೆಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ತೀರ್ಥ ಗ್ರಾಮಸ್ಥರಿಂದ, ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಈ ವೇಳೆ ಶಿಕ್ಷಕನ ಸೇವೆಗಳನ್ನು ನೆನೆದು ಇಡೀ ಗ್ರಾಮವೇ ಕಣ್ಣೀರಿಡುತ್ತಾ ಅವರನ್ನು ಬೀಳ್ಕೊಟ್ಟರು. ಸಮಸ್ತ ಗ್ರಾಮದ ಜನರು ಹಾಗೂ ವಿದ್ಯಾರ್ಥಿಗಳು ರಸ್ತೆ ಅಕ್ಕ ಪಕ್ಕ ನಿಂತು ಶಿಕ್ಷಕನಿಗೆ ಪುಷ್ಪವೃಷ್ಟಿಗೈಯುವ ಮುಖಾಂತರ ಗೌರವವನ್ನು ಸಲ್ಲಿಸಿದರು. ಅರುಣ್ ಕುಮಾರ್ ಶೆಟ್ಟಿ ಅವರು ಹೊರಡುವ ವೇಳೆ ಮಕ್ಕಳೊಂದಿಗೆ ಗ್ರಾಮಸ್ಥರು ಕಣ್ಣೀರಾದರು.
ಗ್ರಾಮಸ್ಥರ ಸಮಸ್ಯೆಗೂ ಇವರೇ ಪರಿಹಾರ: 2005ರಲ್ಲಿ ತೀರ್ಥ ಗ್ರಾಮಕ್ಕೆ ಆಗಮಿಸಿ ಅಂದಿನಿಂದ ಇಂದಿನವರೆಗೆ ಸುದೀರ್ಘವಾಗಿ ಸೇವೆ ಸಲ್ಲಿಸಿದ ಶಿಕ್ಷಕರು ಗ್ರಾಮದಲ್ಲಿ ಎಲ್ಲರಿಗೂ ಚಿರಪರಿಚಿತ. ಸಾಮಾಜಿಕ ಮೌಲ್ಯಗಳೊಂದಿಗೆ ಕೆಲಸ ಮಾಡುವ ಅರುಣ್ ಕುಮಾರ್ ಶೆಟ್ಟಿ ಶಾಲೆಗೆ ಮಾತ್ರ ಸೀಮಿತವಾಗದೆ, ಗ್ರಾಮದ ಪ್ರತಿಯೊಂದು ಮನೆಗಳಿಗೂ ಮಾರ್ಗದರ್ಶಕನಾಗಿ ಕೆಲಸ ಮಾಡಿದ್ದಾರೆ. ಪರಿಣಾಮವಾಗಿ ಅವರನ್ನು ಗ್ರಾಮಸ್ಥರು ಕೂಡ ಗುರುವಿನ ಸ್ಥಾನದಲ್ಲಿ ನೋಡುತ್ತಿದ್ದರು.
ಗ್ರಾಮದಲ್ಲಿ ಏನೇ ಸಮಸ್ಯೆಯಾದರೂ ಈ ಶಿಕ್ಷಕರ ಹತ್ತಿರವೇ ಗ್ರಾಮಸ್ಥರು ಸಲಹೆಯನ್ನು ಪಡೆಯುತ್ತಿದ್ದರು. ಬಡತನದಲ್ಲಿ ಬೆಳೆದ ಮಕ್ಕಳಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದ್ದರು. ಯಾವುದೇ ಹಣದ ಆಸೆಗಾಗಿ ಅವರು ತರಬೇತಿ ನೀಡುತ್ತಿರಲಿಲ್ಲ. ಇವರ ಮಾರ್ಗದರ್ಶನದಲ್ಲಿ ಕಲಿತ ನೂರಾರು ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಮಿಂಚುತ್ತಿದ್ದಾರೆ.
ಇನ್ನು ಗ್ರಾಮದಲ್ಲಿ ಏನೇ ಜಗಳಗಳು ನಡೆದರೂ ಅವರಿಗೆ ಬುದ್ಧಿವಾದ ಹೇಳುವಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು. ಕೃಷ್ಣಾ ನದಿ ಪ್ರವಾಹದಲ್ಲಿ ತೀರ್ಥ ಗ್ರಾಮದ ಆಪತ್ಭಾಂಧವನಾಗಿ ಕೆಲಸ ಮಾಡಿದ್ದರು. ಸೌಮ್ಯ ಸ್ವಭಾವದ ಈ ಶಿಕ್ಷಕನಿಗೆ ಗ್ರಾಮದ ಕಿರಿಯರಿಂದ ಹಿಡಿದು ಹಿರಿಯರು ಕೂಡ ಗೌರವವನ್ನು ಸಲ್ಲಿಸುತ್ತಿದ್ದರು. ಇವರು ಹಲವು ಸಮಾಜಪರ ಕಾರ್ಯಗಳನ್ನು ಗ್ರಾಮದಲ್ಲಿ ಮಾಡಿದ್ದಾರೆ. ಪ್ರಗತಿಪರ ಚಿಂತನೆ, ಪರಿಸರ ಬಗ್ಗೆ ಕಾಳಜಿ, ನೀರಾವರಿ ಹೀಗೆ ಹಲವು ರೀತಿಯಲ್ಲಿ ಗ್ರಾಮಸ್ಥರಿಗೆ ಮಾರ್ಗದರ್ಶನ ನೀಡಿದ್ದಾರೆ.
"ಸುಸಂಸ್ಕೃತ ಪುಣ್ಯಭೂಮಿ ತೀರ್ಥ ಗ್ರಾಮವನ್ನು ಬಿಟ್ಟು ಹೋಗುವುದಕ್ಕೆ ನನಗೂ ಮನಸ್ಸಿಲ್ಲ. ಆದರೆ ಊರಿನಲ್ಲಿರುವ ವಯೋವೃದ್ಧರಾದ ತಂದೆ ತಾಯಿಯ ಸೇವೆ ಮಾಡುವುದು ನನ್ನ ಕರ್ತವ್ಯ. ಆದ್ದರಿಂದ ಅನಿವಾರ್ಯವಾಗಿ ಈ ಶಾಲೆಯನ್ನು ತೊರೆಯುತ್ತಿದ್ದೇನೆ. ನಾನು ಮೊದಲಿಗೆ ಬಂದಾಗ ತೀರ್ಥ ಗ್ರಾಮವು ಯಾವುದೇ ಮೂಲಭೂತ ಸೌಕರ್ಯವಿಲ್ಲದೆ ಚಿಕ್ಕ ಗ್ರಾಮವಾಗಿತ್ತು. ಆಗ ನಾನಿಲ್ಲಿ ಕೆಲಸ ಮಾಡಬೇಕಾ ಎಂದು ಅಂದುಕೊಂಡಿದ್ದೆ. ಆದರೆ ಇಲ್ಲಿನ ಜನರ ಜ್ಞಾನ, ಸುಸಂಸ್ಕೃತ ನಡವಳಿಕೆ, ಮೇಲಾಗಿ ಇದು ಪುಣ್ಯ ಭೂಮಿಯಾಗಿದ್ದು, ನನ್ನನ್ನು ಇಲ್ಲಿಯೇ ಶಿಕ್ಷಕನಾಗಿ ಮುಂದುವರೆಯುವಂತೆ ಮಾಡಿತು. ನನ್ನಲ್ಲಿ ಅನೇಕರು ನೀವು ಯಾಕೆ ಆ ಗ್ರಾಮಕ್ಕೆ ಹೋಗುತ್ತೀರಿ? ಪಟ್ಟಣದಲ್ಲಿ ಇಲ್ಲೇ ಕೆಲಸ ಮಾಡಿ ಎಂದು ಹೇಳುತ್ತಿದ್ದರು. ಆದರೆ ತೀರ್ಥ ಗ್ರಾಮದ ಜೊತೆ ನಾನು ಬೆರೆತುಹೋಗಿದ್ದೆ. ನನ್ನ ರಿಟೈರ್ಮೆಂಟ್ ಆಗುವವರೆಗೂ ನಾನು ತೀರ್ಥ ಗ್ರಾಮದಲ್ಲಿ ಕೆಲಸ ಮಾಡಬೇಕು, ಇಲ್ಲವಾದಲ್ಲಿ ನನ್ನ ಗ್ರಾಮಕ್ಕೆ ಹೋಗಬೇಕೆಂದು ನಿರ್ಧಾರ ಮಾಡಿದ್ದೆ. ಒಲ್ಲದ ಮನಸ್ಸಿನಿಂದ ಅನಿವಾರ್ಯವಾಗಿ ಈ ಗ್ರಾಮವನ್ನು ತೊರೆಯುತ್ತಿದ್ದೇನೆ" - ಅರುಣ್ ಕುಮಾರ್ ಶೆಟ್ಟಿ, ಶಿಕ್ಷಕ
ಇದನ್ನೂ ಓದಿ:'ನಮ್ ಬಿಟ್ಟು ಹೋಗಬೇಡಿ ಸರ್..': ವರ್ಗಾವಣೆಗೊಂಡ ಶಿಕ್ಷಕರನ್ನ ತಬ್ಬಿ ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿಗಳು!