ಬೆಳಗಾವಿ: ಇಲ್ಲಿನ ಪಿಯು ಕಾಲೇಜೊಂದರಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಡಧ್ವಜ ಹಿಡಿದು ಕುಣಿಯುತ್ತಿದ್ದ ವಿದ್ಯಾರ್ಥಿಯೊಬ್ಬನಿಗೆ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ.
ನಡೆದಿದ್ದೇನು?: ನಿನ್ನೆ ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಂಗೀತಕ್ಕೆ ಹೆಜ್ಜೆ ಹಾಕುತ್ತಿದ್ದರು. ವಿದ್ಯಾರ್ಥಿಯೊಬ್ಬ ನಾಡಧ್ವಜ ಪ್ರದರ್ಶಿಸುತ್ತ ಕುಣಿಯುತ್ತಿದ್ದ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಇನ್ನೊಂದು ಗುಂಪಿನ ವಿದ್ಯಾರ್ಥಿಗಳು ಆತನನ್ನು ಥಳಿಸಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸುದ್ದಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
ಡಿಸಿಪಿ ಪ್ರತಿಕ್ರಿಯೆ: ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವೀಂದ್ರ ಗಡಾದಿ ಪ್ರತಿಕ್ರಿಯಿಸಿ, 'ಸಂಜೆ 7.30ರ ಸುಮಾರಿಗೆ ಕಾಲೇಜಿನಲ್ಲಿ ಇಂಟರ್ ಕಾಲೇಜ್ ಫೆಸ್ಟ್ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಕನ್ನಡ ಬಾವುಟ ಹಿಡಿದು ಡ್ಯಾನ್ಸ್ ಮಾಡುತ್ತಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಲಾಗಿದೆ. ಮೂವರು ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಹಲ್ಲೆಗೊಳಗಾದ ವಿದ್ಯಾರ್ಥಿಯಿಂದ ಮಾಹಿತಿ ಪಡೆದುಕೊಂಡಿದ್ದೇವೆ. ಯಾರು ಹಲ್ಲೆ ಮಾಡಿದ್ದಾರೋ ಅವರ ಗುರುತು ಪತ್ತೆ ಹಚ್ಚಿ ವಿಚಾರಣೆ ಮಾಡುತ್ತೇವೆ. ಈವರೆಗೂ ದೂರು ದಾಖಲಾಗಿಲ್ಲ' ಎಂದರು.
ಸುದ್ದಿ ತಿಳಿಯುತ್ತಿದ್ದಂತೆ ಕಾಲೇಜಿಗೆ ಕನ್ನಡ ಪರ ಸಂಘಟನೆ ಮುಖಂಡರು ಭೇಟಿ ನೀಡಿದರು. ಕಾಲೇಜು ಸಿಬ್ಬಂದಿ ಕನ್ನಡ ಪರ ಸಂಘಟನೆ ಮುಖಂಡರನ್ನು ತಡೆದರು. ಇದರಿಂದ ಆಕ್ರೋಶಗೊಂಡ ಹೋರಾಟಗಾರರು ಇಂದು ಕಾಲೇಜಿಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ:ವೈಎಸ್ಆರ್ ತೆಲಂಗಾಣ ಅಧ್ಯಕ್ಷೆ ವೈಎಸ್ ಶರ್ಮಿಳಾ ಬಂಧನ: ಹೈದರಾಬಾದ್ಗೆ ಸ್ಥಳಾಂತರ