ಚಿಕ್ಕೋಡಿ (ಬೆಳಗಾವಿ) : ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತಿದ್ದಂತೆ ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟ ಮತ್ತೆ ಮುನ್ನೆಲೆಗೆ ಬಂದಿದೆ. ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದರೂ ಸಹ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಸೆ.3 ರಂದು ನಿಪ್ಪಾಣಿಯ ರೈತ ಹುತಾತ್ಮ ವೃತ್ತದಲ್ಲಿ ಲಿಂಗ ಪೂಜೆ ಸಲ್ಲಿಸುವ ಮುಖಾಂತರ ಹೋರಾಟಕ್ಕೆ ಚಾಲನೆ ನೀಡಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಅಥಣಿ ಪಟ್ಟಣದಲ್ಲಿ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಸ್ವಾಮೀಜಿ, ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಅದರೊಂದಿಗೆ ಲಿಂಗಾಯತ ಒಳಪಂಗಡಗಳಿಗೆ 2ಎ ಮೀಸಲಾತಿ ಬೇಕು ಎಂದು ಕಳೆದ ಮೂರು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಹೋರಾಟದ ಪ್ರತಿಫಲವಾಗಿ ಬಿಜೆಪಿ ಸರ್ಕಾರ ಕೊನೆಗಳಿಗೆಯಲ್ಲಿ ಮೀಸಲಾತಿ ನೀಡಿತ್ತು. ಆ ಮೀಸಲಾತಿ ಜನರಲ್ಲಿ ಗೊಂದಲ ಮೂಡಿಸಿದೆ. ಆರ್ಥಿಕವಾಗಿ ಹಿಂದುಳಿದ ಸಮಾಜಕ್ಕೆ ಮೀಸಲಾತಿ ಅಗತ್ಯವಾಗಿದೆ ಎಂದು ಒತ್ತಾಯಿಸಿದರು.
ನೂತನ ಸರ್ಕಾರ ರಚನೆಯಾಗಿ ಸಿಎಂ ಸಿದ್ದರಾಮಯ್ಯ ಅಧಿಕಾರ ಸ್ವೀಕಾರ ಮಾಡಿದ ಸಂದರ್ಭದಲ್ಲಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವಂತೆ ಶಾಸಕರು ಮುಖಂಡರಿಗೆ ಮನವಿ ಸಲ್ಲಿಸಲಾಗಿತ್ತು. ಸಿಎಂ ಕಾನೂನು ತಜ್ಞರ ಸಭೆ ಕರೆಯುತ್ತೇನೆ ಎಂದು ಹೇಳಿದರು. ಆದರೆ ಇದುವರೆವಿಗೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಮತ್ತೊಮ್ಮೆ ನಾವು ಮೀಸಲಾತಿಗೋಸ್ಕರ ಹೋರಾಟಕ್ಕೆ ಸಿದ್ಧವಾಗಿದ್ದೇವೆ ಎಂದು ಸ್ವಾಮೀಜಿ ಹೇಳಿದರು.
ಆ ಹೋರಾಟದ ಒಂದು ಹೆಜ್ಜೆಯಾಗಿ ಅಥಣಿ ಶಿವಯೋಗಿಗಳ ಆಶೀರ್ವಾದ ಪಡೆದುಕೊಂಡ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು. ಇಡೀ ರಾಜ್ಯಾದ್ಯಂತ ಮತ್ತೆ ಹೋರಾಟವನ್ನು ಪ್ರಾರಂಭವನ್ನು ಮಾಡುತ್ತೇವೆ. ಬರುವ ಲೋಕಸಭಾ ಚುನಾವಣೆ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಮಹತ್ವದ್ದಾಗಿದೆ. ಇದರಿಂದ ಎರಡೂ ಪಕ್ಷಗಳ ಗಮನ ಸೆಳೆಯಲು ನಾವು ಮತ್ತೆ ನಿಪ್ಪಾಣಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಮ್ಮ ಹೋರಾಟವನ್ನು ಪ್ರಾರಂಭ ಮಾಡುತ್ತೇವೆ ಎಂದು ಸ್ವಾಮೀಜಿ ತಿಳಿಸಿದರು.