ಬೆಳಗಾವಿ:ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಟೀಕೆಗಳಿಗೆ ಉಪಚುನಾವಣೆಯ ಫಲಿತಾಂಶದಲ್ಲಿ ಉತ್ತರ ಸಿಗಲಿವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಮಾಧ್ಯಮಗಳ ಜತೆ ಮಾತನಾಡಿದ ಅವರು, ಯಡಿಯೂರಪ್ಪ ಏನು ಮಾಡಿದ್ದಾರೆ, ಏನು ಮಾಡಿಲ್ಲ ಎಂಬುವುದಕ್ಕೆ ಕಳೆದ ಬಜೆಟ್ನಲ್ಲಿ ಮಹಿಳೆಯರಿಗೆ ಮೀಸಲಿಟ್ಟಿರುವ 35 ಸಾವಿರ ಕೋಟಿ ರೂ. ಸಾಕ್ಷಿ. ಇದಲ್ಲದೇ ಸಾಕಷ್ಟು ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೆ ತಂದಿದ್ದೇವೆ. ಹೀಗಾಗಿ ಜನರು ನಮ್ಮೊಂದಿಗೆ ಇದ್ದಾರೆ ಎಂದರು.
ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಿಎಸ್ವೈ ಬೆಳಗಾವಿ ಸೇರಿದಂತೆ ಎರಡು ವಿಧಾನ ಸಭೆ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶವೇ ಸಿದ್ದರಾಮಯ್ಯ ಅವರ ಟೀಕೆಗಳಿಗೆ ಉತ್ತರ ನೀಡಲಿದೆ. ನಾವು ಏನು ಮಾಡಿಲ್ಲಾ ಎಂಬುದನ್ನು ಸಿದ್ದರಾಮಯ್ಯ ಹೇಳಿಕೊಳ್ಳಲಿ. ನನ್ನ 50 ವರ್ಷದ ಜೀವನದಲ್ಲಿ ಯಾವಾಗಲೂ ಪ್ರವಾಸ, ಓಡಾಟ ಮಾಡಿದ್ದೇನೆ. ಹೀಗಾಗಿ ನನಗೆ ಯಾವುದೇ ರೀತಿಯ ಶ್ರಮ ಆಗುವುದಿಲ್ಲ. ಜನ ಎಲ್ಲಿಯವರೆಗೆ ಸ್ಪಂದಿಸುತ್ತಾರೋ ಅಲ್ಲಿಯವರೆಗೆ ನಾನು ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಸಾರಿಗೆ ನೌಕರರಿಗೆ ಸಿಎಂ ಎಚ್ಚರಿಕೆ
6ನೇ ವೇತನ ಆಯೋಗದ ಪ್ರಕಾರ ವೇತನ ನೀಡಲು ಆಗುವುದಿಲ್ಲ. ಶೇ 8ರಷ್ಟು ವೇತನ ಹೆಚ್ಚಳ ಮಾಡುವುದಕ್ಕೆ ಸೂಚಿಸಲಾಗಿದೆ. ವೇತನ ಏರಿಕೆ ಒಪ್ಪಿಕೊಂಡು ಕೆಲಸ ಮಾಡಬೇಕು. ಇಲ್ಲವಾದರೇ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧಾರ ಮಾಡಿದ್ದೇವೆ. ಇಂದು ಬೆಂಗಳೂರನಲ್ಲಿ ಮತ್ತೊಂದು ಸುತ್ತಿನ ಪ್ರಯತ್ನ ಮಾಡುತ್ತೇನೆ. ಒಪ್ಪದಿದ್ದರೆ ಕಾನೂನಿನಡಿ ಕ್ರಮ ಕೈಗೊಳ್ಳುತ್ತೇವೆ ಎಂದರು.