ಬೆಳಗಾವಿ: ನಗರದ ಅನಗೋಳದ ಇಂದಿರಾ ನಗರದಲ್ಲಿ ಐದು ವರ್ಷದ ಮಗುವಿನ ಮೇಲೆ ಬೀದಿ ನಾಯಿ ದಾಳಿ ನಡೆಸಿದೆ. ಗಾಯಾಳುವಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮನೆ ಮುಂಭಾಗದಲ್ಲಿ ಆಟವಾಡುತ್ತಿದ್ದಾಗ ಘಟನೆ ನಡೆದಿದೆ.
ಪಾಲಿಕೆಯ ಮಾಜಿ ಸದಸ್ಯ ವಿನಾಯಕ ಗುಂಜಟ್ಕರ್ ಮಾತನಾಡಿ, "ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಈ ಕುರಿತು ಹಲವು ಬಾರಿ ಪಾಲಿಕೆಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಕ್ರಮ ಕೈಗೊಂಡಿಲ್ಲ. ಬಾಲಕನ ಕೂಗಾಟ ಕೇಳಿದ ಜನರು ನಾಯಿಯಿಂದ ಬಾಲಕನ ರಕ್ಷಣೆ ಮಾಡಿದ್ದಾರೆ. ಅನಗೋಳದ ಸರ್ಕಾರಿ ಶಾಲೆಯ ಪಕ್ಕದಲ್ಲಿಯೇ ಬೀದಿ ನಾಯಿಗಳು ಹೆಚ್ಚಾಗಿವೆ. ಪಾಲಿಕೆ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸಲಾಗುವುದು" ಎಂದು ಎಚ್ಚರಿಸಿದರು.
ಇದೇ ರೀತಿ ಬುಧವಾರ ಹೈದರಾಬಾದ್ನ ಅಂಬರ್ಪೇಟ್ ಎಂಬಲ್ಲಿ ನಾಲ್ಕು ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿಮಾಡಿ ಕೊಂದು ಹಾಕಿದ ಘಟನೆ ವರದಿಯಾದ ಬೆನ್ನಲ್ಲೇ ಒಂದೇ ದಿನ 16 ಜನರ ಮೇಲೆ ದಾಳಿ ಆಗಿರುವುದು ತಿಳಿದು ಬಂದಿದೆ. ಈ ನಡುವೆ ಹೈದರಾಬಾದ್ನಲ್ಲಿ 5.5 ಲಕ್ಷ ಬೀದಿ ನಾಯಿಗಳಿವೆ ಎಂದು ಅಧಿಕಾರಿಗಳು ತಿಳಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ಅಂಬರ್ಪೇಟ್ನ ಘಟನೆ ಮಾಸುವ ಮೊದಲೇ ಚೈತನ್ಯಪುರಿಯಲ್ಲಿ ನಾಲ್ಕು ವರ್ಷದ ಮತ್ತೊಬ್ಬ ಬಾಲಕನ ಮೇಲೆ ನಾಯಿಗಳು ದಾಳಿ ನಡೆಸಿವೆ. ಪೋಷಕರು ಎಚ್ಚರಿಕೆಯಿಂದ ಮಗು ಬದುಕುಳಿದಿದೆ. ಇತ್ತೀಚೆಗೆ ರಂಗಾರೆಡ್ಡಿ ಜಿಲ್ಲೆಯಲ್ಲಿ 14 ಮಂದಿ, ಯಾದಾದ್ರಿ ಭುವನಗಿರಿ ಜಿಲ್ಲೆಯಲ್ಲಿ ಒಬ್ಬರು, ಖಮ್ಮಂ ಜಿಲ್ಲೆಯಲ್ಲಿ ಬಾಲಕನೊಬ್ಬನ ಮೇಲೆ ನಾಯಿಗಳು ದಾಳಿ ನಡೆಸಿದ್ದವು. ರಂಗಾರೆಡ್ಡಿ ಜಿಲ್ಲೆಯ ಯಾಚರಂ ಗ್ರಾಮದಲ್ಲಿ ಗುರುವಾರ ಹುಚ್ಚು ನಾಯಿಯೊಂದು ಅಟ್ಟಹಾಸ ಮೆರೆದಿದ್ದು, ಗ್ರಾಮದ 10 ಜನರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ.
10 ಜನರಿಗೆ ಕಚ್ಚಿದ ಶ್ವಾನವನ್ನು ಹುಚ್ಚು ನಾಯಿ ಎಂದು ಗುರುತಿಸಿದ ಕೆಲ ಯುವಕರು ಹೊಡೆದು ಸಾಯಿಸಿದ್ದಾರೆ. ನಾಯಿ ಕಚ್ಚಿದ ನಾಲ್ವರಿಗೆ ಜ್ವರದ ಲಕ್ಷಣ ಕಂಡು ಬಂದಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಶ್ವಾನ ಕಚ್ಚಿದ ಕೂಡಲೇ 108 ಆಂಬ್ಯುಲೆನ್ಸ್ಗೆ ಕರೆ ಮಾಡಿ ತಿಳಿಸಿದರೂ ಸುಮಾರು ಒಂದೂವರೆ ಗಂಟೆ ತಡವಾಗಿ ಬಂದಿದೆ ಎಂದು ಸಂತ್ರಸ್ತರು ದೂರಿದ್ದಾರೆ. ರಂಗಾರೆಡ್ಡಿ ಜಿಲ್ಲೆಯ ಕಂದುಕೂರು ಮಂಡಲ ವ್ಯಾಪ್ತಿಯ ಗ್ರಾಮದಲ್ಲಿ ಗುರುವಾರ ನಾಲ್ಕು ಜನರ ಮೇಲೆ ನಾಯಿಗಳು ದಾಳಿ ನಡೆಸಿವೆ.
ಇದನ್ನೂಓದಿ:ಕಡಬ: ಕರ್ತವ್ಯನಿರತ ಅರಣ್ಯ, ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ; 7 ಮಂದಿ ಬಂಧನ