ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಬೆಳಗಾವಿ: ಕನ್ನಡ ನಾಡಧ್ವಜಕ್ಕೆ ಶಾಸನಬದ್ಧ ಸ್ಥಾನಮಾನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಕಿಡಿಕಾರಿದ್ದಾರೆ. ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ 6 ವರ್ಷ ಕಳೆದರೂ, ಕನ್ನಡ ಧ್ವಜಕ್ಕೆ ಶಾಸನಬದ್ಧ ಸ್ಥಾನಮಾನಕ್ಕೆ ಕೇಂದ್ರ ಅನುಮೋದನೆ ಯಾಕೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು.
ಹೌದು ಹಳದಿ - ಕೆಂಪು ಕನ್ನಡ ಬಾವುಟಕ್ಕೆ ಶಾಸನಬದ್ಧ ಸ್ಥಾನಮಾನ ನೀಡಬೇಕು ಎಂಬುದು ಪ್ರತಿಯೊಬ್ಬ ಕನ್ನಡಿಗನ ಬಹು ದಿನಗಳ ಕನಸಾಗಿದೆ. ಆದರೆ, ಸರ್ಕಾರ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕಳೆದ ಆರು ವರ್ಷಗಳಿಂದ ಕೇಂದ್ರದಲ್ಲಿ ಕೊಳೆಯುತ್ತಿರುವ ಪ್ರಸ್ತಾವನೆ ಬಗ್ಗೆ ರಾಜ್ಯದ 25 ಸಂಸದರು ಹಾಗೂ ದೆಹಲಿ ಪ್ರತಿನಿಧಿಗಳು ಇದರ ಬಗ್ಗೆ ಧ್ವನಿ ಎತ್ತುತ್ತಿಲ್ಲ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅಸಮಾಧಾನ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೆ ಇದಕ್ಕೆ ಯಾವುದೇ ರೀತಿ ಕಾನೂನಿನ ಸಮಸ್ಯೆ ಸಮಸ್ಯೆ ಇಲ್ಲದಿರುವುದ ಬಗ್ಗೆ ದಾಖಲೆಯನ್ನೂ ಭೀಮಪ್ಪ ಗಡಾದ ಬಿಡುಗಡೆ ಮಾಡಿದ್ದಾರೆ.
2015ರಲ್ಲಿ ನಾಡಧ್ವಜ ಹಾರಿಸಲು ಕಾನೂನಿನಲ್ಲಿ ತೊಂದರೆ ಇಲ್ಲ ಎಂದು ಹೈಕೋರ್ಟ್ ಅಡ್ವೊಕೇಟ್ ಜನರಲ್ ಅವರು ಧ್ವಜಕ್ಕೆ ಆಕ್ಷೇಪಣೆಗಳು ಇಲ್ಲ ಎಂದು ಅಭಿಪ್ರಾಯ ಪಟ್ಟಿದ್ದರು. ಅಲ್ಲದೇ 9 ಜನ ಸಾಹಿತಿಗಳು ಚಿಂತಕರ ಸಮಿತಿಯಿಂದ ನಾಡಧ್ವಜದ ವಿನ್ಯಾಸವಾಗಿದೆ. ನಂತರ 2018 ರ ಮಾರ್ಚ್ 8 ರಂದು ರಾಜ್ಯ ಸಚಿವ ಸಂಪುಟದ ಅನುಮೋದನೆ ಸಿಕ್ಕ ನಂತರ ಪ್ರಸ್ತಾವನೆ ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಪ್ರಸ್ತಾವನೆ ಕಳುಹಿಸಿ 6 ವರ್ಷ ಕಳೆದರೂ ಕೇಂದ್ರ ಸರ್ಕಾರ ಮಾತ್ರ ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಕೇಂದ್ರದ ಮೇಲೆ ಒತ್ತಡ ಹೇರಬೇಕಿದ್ದ ರಾಜ್ಯದ ಸಂಸದರು, ದೆಹಲಿ ಪ್ರತಿನಿಧಿಗಳು ಮೌನಕ್ಕೆ ಶರಣಾಗಿದ್ದಾರೆ ಎಂದು ಭೀಮಪ್ಪ ಗಡಾದ ಕಿಡಿಕಾರಿದರು.
ಕನ್ನಡ ಧ್ವಜಕ್ಕೆ ಶಾಸನಬದ್ಧ ಸ್ಥಾನಮಾನ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿಳಂಬ ನೀತಿಗೆ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ರಾಜ್ಯಕ್ಕೆ ಕರ್ನಾಟಕ ನಾಮಕರಣವಾಗಿ 50 ವರ್ಷ ಪೂರ್ಣವಾಗಿದ್ದು, ಇದರ ಸಂಭ್ರಮಾಚಣೆ ಹಿನ್ನೆಲೆಯಲ್ಲಿ ಸರ್ಕಾರ ಕಚೇರಿಗಳ ಮೇಲೆ ರಾಷ್ಟ್ರಧ್ವಜಕ್ಕೆ ಚ್ಯುತಿ ಬರದಂತೆ ನಾಡಧ್ವಜ ಹಾರಾಟಕ್ಕೆ ಕ್ರಮ ವಹಿಸಬೇಕು. ಇಲ್ಲವಾದಲ್ಲಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ಎಚ್ಚರಿಸಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಭೀಮಪ್ಪ ಗಡಾದ್ ತಿಳಿಸಿದರು.
ಇದನ್ನೂ ಓದಿ :ಮೈಸೂರು ರಾಜ್ಯ 'ಕರ್ನಾಟಕ'ವಾಗಿ 50 ಸಂವತ್ಸರ: ವರ್ಷಪೂರ್ತಿ ಸರ್ಕಾರದಿಂದ ವಿವಿಧ ಕಾರ್ಯಕ್ರಮ