ಕರ್ನಾಟಕ

karnataka

ETV Bharat / state

ರಾಜ್ಯದಲ್ಲೂ ಪೌರತ್ವದ ಕಿಚ್ಚು: ಬಳ್ಳಾರಿ, ಚಿಕ್ಕೋಡಿಯಲ್ಲಿ ನಿಷೇಧಾಜ್ಞೆ, ಕೊಪ್ಪಳದಲ್ಲಿ ಮೈಕ್​​​ ಮೂಲಕ ಎಚ್ಚರಿಕೆ - Warning to the public by police at Koppal

ರಾಜ್ಯಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ನಡೆಯುತ್ತಿದ್ದು, ನಿಷೇಧಾಜ್ಞೆ ನಡುವೆಯೂ ಜನರು ಬೀದಿಗಿಳಿದಿದ್ದಾರೆ. ಆದ್ದರಿಂದ ಪೊಲೀಸ್​ ಭದ್ರತೆ ಹೆಚ್ಚಿಸಲಾಗಿದ್ದು, ಎಲ್ಲೆಡೆ ಖಾಕಿ ಸರ್ಪಗಾವಲು ಹಾಕಲಾಗಿದೆ.

statewide Protest against Citizenship Act
ವಿವಿದೆಡೆ ನಿಷೇಧಾಜ್ಞೆ ಜಾರಿ

By

Published : Dec 19, 2019, 12:30 PM IST

ಬಳ್ಳಾರಿ:ರಾಜ್ಯಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಕಿಚ್ಚು ಹೆಚ್ಚಾಗಿದ್ದು, ನಿಷೇಧಾಜ್ಞೆ ನಡುವೆಯೂ ಜನರು ಬೀದಿಗಿಳಿದಿದ್ದಾರೆ. ಆದ್ದರಿಂದ ಪೊಲೀಸ್​ ಭದ್ರತೆ ಹೆಚ್ಚಿಸಲಾಗಿದ್ದು, ಎಲ್ಲೆಡೆ ಖಾಕಿ ಸರ್ಪಗಾವಲು ಹಾಕಲಾಗಿದೆ.

ವಿವಿಧೆಡೆ ನಿಷೇಧಾಜ್ಞೆ ಜಾರಿ

ಗಣಿನಾಡು ಬಳ್ಳಾರಿಯಲ್ಲಿ ಮೂರು ದಿನಗಳವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಜಿಲ್ಲೆಯಾದ್ಯಂತ ಒಟ್ಟು 1500 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಮತ್ತು ಹೋಮ್ ಗಾರ್ಡ್​ಗಳನ್ನು ಭದ್ರತೆ ದೃಷ್ಟಿಯಿಂದ ನಿಯೋಜನೆ ಮಾಡಲಾಗಿದೆ ಎಂದು ಎಸ್​ಪಿ ಸಿಕೆ ಬಾಬಾ ತಿಳಿಸಿದ್ದಾರೆ.

ನಗರದ ರಾಯಲ್ ವೃತ್ತದಲ್ಲಿ ಮಾತನಾಡಿದ ಅವರು, ಬಳ್ಳಾರಿ ರಾಯಲ್, ಮೋತಿ, ಎಸ್.ಪಿ ಸರ್ಕಲ್, ಸಂಗಮ್, ಕೌಲ್ ಬಜಾರ್ ಪ್ರದೇಶಗಳಲ್ಲಿ ಮತ್ತು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಹೊಸಪೇಟೆಯಲ್ಲಿ ಪರಿಸ್ಥಿತಿ ಶಾಂತವಾಗಿದೆ. ಜಿಲ್ಲೆಯಲ್ಲಿ ಕೆ.ಎಸ್.ಆರ್.ಪಿ ಮತ್ತು ಡಿ.ಎ.ಆರ್ ಎರಡು ತುಕಡಿಗಳನ್ನು ಭದ್ರತೆಯ ದೃಷ್ಟಿಯಿಂದ ನಿಯೋಜನೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಪ್ರತಿಭಟನೆ ಮಾಡುವಂತಿಲ್ಲ. ಯಾರಾದರೂ ಕಾನೂನಿನ ನಿಯಮ ಉಲ್ಲಂಘನೆ ಮಾಡಿದ್ರೆ ಅವರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಎಂದರು.

ಪೌರತ್ವ ಕಾಯ್ದೆ ಕುರಿತು ಪರ, ವಿರೋಧ ಪ್ರತಿಭಟನೆ ಹಿನ್ನೆಲೆ ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಾಂತ 144 ಸೆಕ್ಷನ್​ ಜಾರಿ ಮಾಡಲಾಗಿದ್ದು, ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿಯಲ್ಲೂ ನಿಷೇಧಾಜ್ಞೆ ಹೇರಲಾಗಿದೆ. ಡಿ. 19 ಬೆಳಿಗ್ಗೆ 6ರಿಂದ ಡಿ. 21ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆಯಿದ್ದು, ಮದುವೆ ಸಮಾರಂಭ ಹೊರತುಪಡಿಸಿ ಬೇರೆ ಯಾವುದೇ ಸಭೆ, ಸಮಾರಂಭ ನಡೆಸದಂತೆ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಸೂಚನೆ ನೀಡಿದ್ದಾರೆ.

ಕೊಪ್ಪಳದಲ್ಲಿ ಈಗಾಗಲೇ ನಿಷೇಧಾಜ್ಞೆ ಜಾರಿಯಲ್ಲಿದ್ದು, ಈ ಕುರಿತು ನಗರದಲ್ಲಿ ಪೊಲೀಸರು ಮೈಕ್ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ನಿಷೇಧಾಜ್ಞೆ ಜಾರಿಯಾಗಿರುವುದರಿಂದ ಯಾವುದೇ ಸಭೆ, ಸಮಾರಂಭ, ಗುಂಪು ಕಟ್ಟಿಕೊಂಡು ಓಡಾಡುವುದು ಸೇರಿದಂತೆ ಪ್ರತಿಭಟನೆ ನಡೆಸಬಾರದು. ಯಾವುದೇ ವ್ಯಕ್ತಿ ಅಥವಾ ಸಮುದಾಯದ ವಿರುದ್ಧ ತೇಜೋವಧೆ ಮಾಡುವ ಮತ್ತು ಪ್ರಚೋದನಾತ್ಮಕ ಮಾತುಗಳನ್ನು ಆಡಬಾರದು. ನಿಯಮ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಗರದಲ್ಲಿ ಪೊಲೀಸರು ಮೈಕ್‌ ಮೂಲಕ ಎಚ್ಚರಿಕೆ ನೀಡುತ್ತಿದ್ದಾರೆ. ನಿಷೇಧಾಜ್ಞೆ ಹಿನ್ನೆಲೆ ನಗರದ ಕೇಂದ್ರೀಯ ಬಸ್ ನಿಲ್ದಾಣ, ಲೇಬರ್ ಸರ್ಕಲ್, ಅಶೋಕ ಸರ್ಕಲ್ ಸೇರಿದಂತೆ ವಿವಿಧೆಡೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ABOUT THE AUTHOR

...view details