ಬೆಳಗಾವಿ: ತಾಲೂಕಿನ ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಮೃಗಾಲಯಕ್ಕೆ ರಾಜ್ಯ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹಾದೇವಸ್ವಾಮಿ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪರಿಶೀಲಿಸಿದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂತರಾಮನಟ್ಟಿ ಮೃಗಾಲಯಕ್ಕೆ ಮುಂದಿನ ವಾರವೇ ಹುಲಿ ಕಳುಹಿಸಿ ಕೊಡಲಾಗುವುದು. ಕೇಂದ್ರ ಮೃಗಾಲಯ ಪ್ರಾಧಿಕಾರದ ಮಾರ್ಗಸೂಚಿ ಪ್ರಕಾರ ಪ್ರಾಣಿಗಳ ಆರೈಕೆ ನೋಡಿಕೊಳ್ಳಲಾಗುವುದು ಎಂದರು.
ರಾಜ್ಯ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹಾದೇವಸ್ವಾಮಿ ಬೆಳಗಾವಿಗರು ಮತ್ತು ಸುತ್ತಲಿನ ಜಿಲ್ಲೆಗಳ ಪ್ರಾಣಿಪ್ರಿಯರು ಪ್ರಾಣಿಗಳನ್ನು ದತ್ತು ಪಡೆದರೆ ಮೃಗಾಲಯದ ಸಮಗ್ರ ಅಭಿವೃದ್ಧಿ ಒತ್ತು ಸಿಗಲಿದೆ. ಇದರ ಜೊತೆಗೆ ಜಿಲ್ಲೆಯ ಶಾಸಕರು ಮುತುವರ್ಜಿವಹಿಸಿ ಹೆಚ್ಚಿನ ಅನುದಾನ ನೀಡಬೇಕು. ಮುಂದಿನವಾರ ಪ್ರಾಧಿಕಾರದ ರಾಜ್ಯಮಟ್ಟದ ಸಭೆ ಇದ್ದು, ಭೂತರಾಮನಹಟ್ಟಿ ಝೂನಲ್ಲಿ ನೀರಿನ ಕೊರತೆ ಸೇರಿದಂತೆ ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಬಗ್ಗೆ ಸರಕಾರದ ಜೊತೆಗೆ ಚರ್ಚೆ ಮಾಡಲಾಗುವುದು ಎಂದರು.
ಮೃಗಾಲಯ ಪ್ರವೇಶಕ್ಕೆ ಈಗಿರುವ 20ರೂ. ದರವನ್ನು 40 ರೂ.ಗೆ ಏರಿಸುತ್ತೇವೆ. ಮಕ್ಕಳಿಗೆ 20 ರೂ. ಆಗಲಿದೆ. ಸರ್ಕಾರಿ ಶಾಲೆಗಳಿಗೆ ಉಚಿತ, ಖಾಸಗಿ ಶಾಲೆಯವರಿಗೆ ಶೇ. 20 ರಿಯಾಯಿತಿ ದರದೊಂದಿಗೆ ಮೃಗಾಲಯದಲ್ಲಿ ಪ್ರಾಣಿ ಕುರಿತ ಪಾಠ ಮಾಡುವ ಅವಕಾಶ ಕೊಡುವ ವಿಚಾರವಿದೆ. 25 ಸಾವಿರ ರೂ. ಹೆಚ್ಚು ಹಣ ಕೊಟ್ಟು ಪ್ರಾಣಿ ದತ್ತು ಪಡೆದರೆ ಕರ್ನಾಟಕದ 9 ಮೃಗಾಲಯದಲ್ಲಿ 10 ಉಚಿತ ಪ್ರವೇಶ ಸೌಲಭ್ಯ ಕೊಡುವ ಚರ್ಚೆ ನಡೆದಿದೆ ಎಂದು ತಿಳಿಸಿದರು.
ಇದೇ ವೇಳೆ ಡಿಸಿಎಫ್ ಮತ್ತು ಝೂ ಕಾರ್ಯನಿರ್ವಾಹಕ ನಿರ್ದೇಶಕ ಎಂ.ವಿ.ಅಮರನಾಥ, ಎಸ್.ಸಿ.ಅಶೋಕ, ಎಸಿಎಫ್ ಮಲ್ಲಿನಾಥ ಕುಸನಾಳ, ಆರ್ ಎಫ್‍ಒ, ಕ್ಯೂರೇಟರ್ ರಾಕೇಶ ಅರ್ಜುನವಾಡ ಇದ್ದರು.