ಬೆಳಗಾವಿ:ಪ್ರಜಾಪ್ರಭುತ್ವದಲ್ಲಿ ಸರ್ಕಾರವನ್ನ ಅಭದ್ರ ಮಾಡುವುದು ಯಾವುದೇ ರಾಜಕೀಯ ಪಕ್ಷ ಅಥವಾ ರಾಜಕೀಯ ನಾಯಕನ ಉದ್ದೇಶ ಆಗಿರಬಾರದು ಎಂದು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು. 50 ರಿಂದ 60 ಮಂದಿ ಶಾಸಕರ ಜೊತೆ ಪ್ರಭಾವಿ ಸಚಿವರೊಬ್ಬರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಹೆಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆ ವಿಚಾರವಾಗಿ ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಹೆಚ್ಡಿಕೆ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಕೊಡಲಿ ಏಟು ಕೊಡುವ ಪ್ರಯತ್ನವಾಗಿದೆ. ಈ ರೀತಿ ಪ್ರಯತ್ನ ಮಾಡಿದವರ ಪರಿಸ್ಥಿತಿ ಏನಾಯಿತು ಗೊತ್ತಲ್ಲ ಎಂದು ಟಾಂಗ್ ನೀಡಿದರು.
ಕಾಂಗ್ರೆಸ್ನಿಂದ 17 ಶಾಸಕರನ್ನು ಗೋವಾ, ಮುಂಬೈಗೆ ಕರೆದುಕೊಂಡು ಹೋದರು. ಏನಾಯ್ತು ಅವರ ಪರಿಸ್ಥಿತಿ. ಈ ರೀತಿ ಸುಳ್ಳು ಪ್ರಚಾರದಿಂದ ನಮ್ಮ ಸರ್ಕಾರಕ್ಕೆ ಯಾವುದೇ ಧಕ್ಕೆ ಆಗಲ್ಲ. ಅಭಿವೃದ್ಧಿ ಕೆಲಸದತ್ತ ನಮ್ಮ ಸರ್ಕಾರ ಇನ್ನೂ ದೃಢವಾಗಿ ಹೆಜ್ಜೆ ಇಡುತ್ತಿದೆ. ಶಾಸಕರ ಅಸಮಾಧಾನವನ್ನು ಸರಿಪಡಿಸುವ ಕೆಲಸವನ್ನು ಸಿಎಂ ಮಾಡುತ್ತಿದ್ದಾರೆ. ಅವರ ಪಕ್ಷದಲ್ಲಿ ಗೊಂದಲ, ಗೋಜಲು ಇದೆ. ನಮ್ಮ ಪಕ್ಷದಲ್ಲಿ ಒಗ್ಗಟ್ಟು ಇದೆ ಎಂಬುದು ಒಂದು ವಾರದ ಸದನ ಕಲಾಪದಲ್ಲಿ ನೋಡಿದ್ದೇವೆ. ಆದರೂ ಈ ತರಹದ ಹೇಳಿಕೆಗಳು ಅಪ್ರಸ್ತುತವಾಗಿದೆ ಎಂದರು.
ನಮ್ಮಲ್ಲಿ ಶಿಂಧೆ, ಪವಾರ್ ಯಾರೂ ಇಲ್ಲ - ಸತೀಶ್:ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿ, ಆ ಕಡೆ ಇರುವವರು ಈ ಕಡೆ ಬರುತ್ತಾರೆ ಅಂತಾರೆ, ಈ ಕಡೆ ಇರುವವರು ಆ ಕಡೆ ಹೋಗ್ತಾರೆ ಅಂತಿದ್ದಾರೆ ಇದು ಇದ್ದಿದ್ದೆ ಎಂದ ಅವರು, ಹೆಚ್ಡಿಕೆ ಪ್ರಭಾವಿ ಸಚಿವರ ಹೇಳಿಕೆ ಬಗ್ಗೆ ಮಾತನಾಡಿ, ಆ ಪ್ರಭಾವಿ ಸಚಿವರು ಯಾರು ಎಂದು ಕುಮಾರಸ್ವಾಮಿಯವರೇ ಹೇಳಬೇಕು. ಹೆಸರು ಹೇಳಿದರೆ ಚರ್ಚೆ ಮುಗಿದೇ ಹೋಗುತ್ತೆ. ಇಲ್ಲವಾದರೆ ಕತ್ತಲಲ್ಲಿ ಹುಡುಕುವ ಕೆಲಸ ಆಗುತ್ತೆ. ಕಾದು ನೋಡೋಣ. ನಮ್ಮಲ್ಲಿ ಶಿಂಧೆ, ಪವಾರ್ ಯಾರೂ ಇಲ್ಲ ಎಂದರು