ಬೆಳಗಾವಿ:ಮಹಿಳೆಗೆ ಯಾವುದೇ ಜವಾಬ್ದಾರಿ ನೀಡಿದರೂ ಆಕೆ ಅಚ್ಚುಕಟ್ಟಾಗಿ ನಿರ್ವಹಿಸುತ್ತಾಳೆ. ವಿಶ್ವಾಸದ್ರೋಹವನ್ನು ಸ್ತ್ರೀಕುಲ ಎಂದೂ ಮಾಡುವುದಿಲ್ಲ. ಆದರೆ ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಯನ್ನು ಸಹಿಸಿಕೊಳ್ಳುವುದಿಲ್ಲ ಎನ್ನುವ ಅಪವಾದವಿದೆ. ಇದನ್ನು ತೊಡೆದು ಹಾಕಲು ನಾವೆಲ್ಲ ಒಂದಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಕಿತ್ತೂರು ಉತ್ಸವದಲ್ಲಿ ಬುಧವಾರ ರಾಜ್ಯಮಟ್ಟದ ಮಹಿಳಾಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. ಚಂದ್ರಯಾನ ಸೇರಿದಂತೆ ಪ್ರತಿಯೊಂದು ಸಾಧನೆಯಲ್ಲೂ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದು. ಈಗ ರಾಜಕೀಯದಲ್ಲಿಯೂ ಶೇ.33ರಷ್ಟು ಮೀಸಲಾತಿ ಘೋಷಣೆಯಾಗಿದೆ. ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ದೇವರಂತೆ ಕಷ್ಟದಲ್ಲಿರುವವರ ಸಹಾಯಕ್ಕೆ ಬಂದಿದ್ದರು ಎಂದು ಸ್ಮರಿಸಿದರು.
ರಾಣಿ ಚನ್ನಮ್ಮ ಇಡೀ ಮಹಿಳಾ ಕುಲಕ್ಕೆ ಸ್ವಾಭಿಮಾನ, ಹೋರಾಟದ ಕಿಚ್ಚು ಹಾಗೂ ಜೀವನ ಸ್ಫೂರ್ತಿಯ ಸಂಕೇತ. ನಾನು ಮೊದಲಿನಿಂದಲೂ ಚನ್ನಮ್ಮನ ಆದರ್ಶವನ್ನು ಮೈಗೂಡಿಸಿಕೊಂಡು ನಡೆಯಲು ಪ್ರಯತ್ನಿಸುತ್ತಿದ್ದೇನೆ. ಗ್ರಾಮೀಣ ಭಾಗದ ಮಹಿಳೆಯರು ತಮ್ಮ ಕುಟುಂಬ, ಮಕ್ಕಳ ವಿದ್ಯಾಭ್ಯಾಸಗಳಿಗಾಗಿ ದಿನವಿಡೀ ಹೋರಾಡುವುದನ್ನು ಹತ್ತಿರದಿಂದ ಕಣ್ಣಾರೆ ಕಂಡಿದ್ದೇನೆ ಎಂದರು.