ಬೆಳಗಾವಿ :ಕೊರೊನಾ ವೈರಸ್ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಅಟ್ಟರ್ ಫ್ಲಾಪ್ ಆಗಿದೆ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಪ್ರತಿಪಕ್ಷದವರು ಮಾತನಾಡಿದ್ರೆ ರಾಜಕಾರಣ ಮಾಡ್ತೀವಿ ಅಂತಾ ಹೇಳ್ತಾರೆ. ಪ್ರತಿಪಕ್ಷದಲ್ಲಿದ್ದರೂ ನಾವು ಸರ್ಕಾರಕ್ಕೆ ಸಹಕಾರ ಕೊಡುತ್ತಿದ್ದೇವೆ. ಯಾವತ್ತೂ ರಾಜಕಾರಣ ಮಾಡಿಲ್ಲ. ಆದರೆ, ನಮ್ಮ ಕೆಲಸವನ್ನು ಮಾಧ್ಯಮಗಳು ಮಾಡುತ್ತಿದ್ದು, ಬೆಳಗಾವಿ ಬಿಮ್ಸ್ ಅವಾಂತರವನ್ನು ತೋರಿಸಿದ್ದೀರಿ ಎಂದರು.
ಕೋವಿಡ್-19 ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಅಟ್ಟರ್ ಫ್ಲಾಪ್: ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ - State govt is atter flap
ಕೋವಿಡ್-19 ನಿರ್ವಹಣೆಯಲ್ಲಿ ಜಿಲ್ಲೆ ಸೇರಿ ರಾಜ್ಯದಲ್ಲಿಯೂ ಸರ್ಕಾರ ಅಟ್ಟರ್ ಫ್ಲಾಫ್ ಆಗಿದೆ ಎಂದು ಹೇಳುವ ಮೂಲಕ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪರೋಕ್ಷವಾಗಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
![ಕೋವಿಡ್-19 ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಅಟ್ಟರ್ ಫ್ಲಾಪ್: ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ Congress MLA Laxmi Hebbalkar](https://etvbharatimages.akamaized.net/etvbharat/prod-images/768-512-8114328-623-8114328-1595331854116.jpg)
ನಮ್ಮ ನಾಯಕರೆಲ್ಲರು ಸೇರಿ ಲೆಕ್ಕ ಕೊಡಿ ಅಭಿಯಾನ ಶುರು ಮಾಡಿದ್ದೇವೆ. ರಾಮನ ಲೆಕ್ಕ.. ಕೃಷ್ಣನ ಲೆಕ್ಕ ಬೆಳಗಾವಿಯಲ್ಲಷ್ಟೇ ಅಲ್ಲ, ಮೇಲೂ ಆಗಿದೆ ಎಂದು ಆರೋಪಿಸಿದರು. ಬೆಳಗಾವಿ ಜಿಲ್ಲೆಗೆ ಒಂದು ಸಾವಿರ ಪಿಪಿಇ ಕಿಟ್ ಕೊಟ್ಟಿದ್ದಾರೆ. ಓರ್ವ ಡಿಸಿಎಂ, ಮೂವರು ಸಚಿವರು, ನಾಲ್ವರು ನಿಗಮ ಮಂಡಳಿ ಅಧ್ಯಕ್ಷರು ಸೇರಿ ಜಿಲ್ಲೆಯ ಒಟ್ಟು 13 ಬಿಜೆಪಿ ನಾಯಕರು ಅಧಿಕಾರದಲ್ಲಿದ್ದಾರೆ. ಆದರೆ, ಈವರೆಗೂ ಕೋವಿಡ್ ನಿರ್ವಹಣೆಯಲ್ಲಿ ಜಿಲ್ಲೆ ಸೇರಿ ರಾಜ್ಯದಲ್ಲಿಯೂ ಸರ್ಕಾರ ಅಟ್ಟರ್ ಫ್ಲಾಫ್ ಆಗಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮಿ ಹೆಬ್ಬಾಳ್ಕರ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ನನ್ನ ಕ್ಷೇತ್ರದ ಪಂತಬಾಳೇಕುಂದ್ರಿಯ ಓರ್ವ ಹಿರಿಯ ವ್ಯಕ್ತಿ ಬಿಮ್ಸ್ನಲ್ಲಿ ಮೃತಪಟ್ಟಿದ್ದಾರೆ. ಅವರಿಗೆ ಸರಿಯಾಗಿ ಚಿಕಿತ್ಸೆ ಸಿಗದಿದ್ದಕ್ಕೆ ಅವರು ಮೃತಪಟ್ಟಿದ್ದಾರೆ. ಅವರು ಸಾವನ್ನಪ್ಪಿದ ಸುದ್ದಿ ಕೇಳಿ ಅವರ ತಂಗಿ ಹೃದಯಾಘಾತದಿಂದ ಸತ್ತಿದ್ದಾರೆ. ಈ ವಿಷಯ ತಿಳಿದು ಮತ್ತೋರ್ವ ತಂಗಿಯೂ ಮೃತಪಟ್ಟಿದ್ದಾರೆ. ಒಂದೇ ಕುಟುಂಬದಲ್ಲಿ ಮೂವರು ಅಣ್ಣ, ತಂಗಿಯರು ಮೃತಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಅವ್ಯವಸ್ಥೆ ಆಗದಂತೆ ನೋಡಿಕೊಳ್ಳಲಿ ಎಂದರು.