ಬೆಳಗಾವಿ: ವಿರೋಧ ಪಕ್ಷದವರ ಒತ್ತಡ ಮತ್ತು ಜನರಿಗೆ ಪ್ಯಾಕೇಜ್ ಕೊಟ್ಟಿದ್ದೇವೆ ಎಂದು ಬಿಂಬಿಸಿಕೊಳ್ಳುವುದಕ್ಕಾಗಿ ಮಾತ್ರ ರಾಜ್ಯ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಘೋಷಣೆ ಮಾಡಿರುವ ಕೋವಿಡ್ ಪ್ಯಾಕೇಜ್ನಲ್ಲಿ ಜನರಿಗೆ ಅನುಕೂಲವಾಗುವ ಯೋಜನೆಗಳು ಇಲ್ಲ. ಕೇವಲ ಕಾಟಾಚಾರಕ್ಕಾಗಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಮಿಳುನಾಡಿನಲ್ಲಿ ಪ್ರತಿಯೊಬ್ಬರಿಗೂ 4,000 ರೂ. ಘೋಷಣೆ ಮಾಡಿದ್ದಾರೆ. ಆಂಧ್ರ ಪ್ರದೇಶದಲ್ಲಿ ಸರ್ಕಾರಿ ಹಾಗೂ ಖಾಸಗಿ ಸೇರಿ ಎಲ್ಲ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವುದಾಗಿ ಘೋಷಿಸಿದ್ದಾರೆ. ಆದರೆ, ನಮ್ಮಲ್ಲಿ ಅಂತಹ ಯಾವುದೇ ಯೋಜನೆಗಳನ್ನು ಘೋಷಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ: ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ಬೆಡ್ಗಳಿವೆ. ಆದರೆ, ಸಿಬ್ಬಂದಿ ಹಾಗೂ ಆಕ್ಸಿಜನ್ ಕೊರತೆ ಇದ್ದು, ಸರ್ಕಾರ ತಕ್ಷಣ ಸಿಬ್ಬಂದಿ ನೇಮಿಸಿ, ಆಕ್ಸಿಜನ್ ಪೂರೈಸಬೇಕು. ಸರ್ಕಾರ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿದೆ. ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಸರ್ಕಾರಕ್ಕೆ ಸೋಂಕು ತಡೆಗಟ್ಟುವ ಇಚ್ಛಾಶಕ್ತಿಯೇ ಇಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಹಾಗೂ ಆಕ್ಸಿಜನ್ ನೀಡದ ಹೊರತು ಜನರಿಗೆ ಯಾವುದೇ ರೀತಿ ಸೌಲಭ್ಯಗಳನ್ನು ಪಡೆಯಲು ಆಗುವುದಿಲ್ಲ. ಆದ ಕಾರಣ ತಕ್ಷಣ ಸಿಬ್ಬಂದಿ, ಆಕ್ಸಿಜನ್ ನೀಡಬೇಕು ಎಂದು ಆಗ್ರಹಿಸಿದರು.
ಕೋವಿಡ್ 2ನೇ ಅಲೆ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ಜಾಗೃತಿ ಮೂಡಿಸದೇ ಇರುವುದು, ಮದುವೆ, ಜಾತ್ರೆ, ಅಂತ್ಯಕ್ರಿಯೆಯಂತಹ ಕಾರ್ಯಗಳಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದು ಕೊರೊನಾ ಹೆಚ್ಚಳಕ್ಕೆ ಕಾರಣವಾಗಿದೆ. ಆದ ಕಾರಣ ಸರ್ಕಾರ ಇವುಗಳನ್ನು ತಡೆಯುವ ನಿಟ್ಟಿನಲ್ಲಿಯೂ ಕ್ರಮ ತೆಗೆದುಕೊಳ್ಳಬೇಕು ಎಂದರು.
ಓದಿ:ಪ್ರಧಾನಿ ದತ್ತಾತ್ರೇಯನ ದರ್ಶನ ಮಾಡಿದರೆ ಕೊರೊನಾ ನಿಯಂತ್ರಣ : ರಾಜಗುರು ದ್ವಾರಕಾನಾಥ್ ಗುರೂಜಿ