ಬೆಳಗಾವಿ :ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಫ್ಲಾಪ್ ಇದೆ. ಅವರು ಅಧಿಕಾರದಲ್ಲಿದ್ದ ರಾಜ್ಯಗಳಲ್ಲಿ ಯಾವುದೇ ಗ್ಯಾರಂಟಿ ಈಡೇರಿಸಿಲ್ಲ. ಹೀಗಾಗಿ ಬಿಜೆಪಿಗೆ ಒನ್‌ಸೈಡ್ ಗೆಲುವು ನಿಶ್ಚಿತ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿಯ ಬಿಜೆಪಿ ಕಚೇರಿಯಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರ ಸೇರಿ ಹಲವಾರು ರಾಜ್ಯಗಳ ಚುನಾವಣೆಯಲ್ಲಿ ಅವರ ಗ್ಯಾರಂಟಿ ಕಾರ್ಡ್ಗಳನ್ನು ಜನರು ನಂಬಿಲ್ಲ. ಹೀಗಾಗಿ ಬಿಜೆಪಿ ಮೇಲೆ ಜನ ಭರವಸೆ ಇಟ್ಟಿದ್ದು, ಪ್ರಚಂಡ ಬಹುಮತದಿಂದ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ. ಕೇವಲ ಮೂರು ಕ್ಷೇತ್ರಗಳಲ್ಲಿ ಮಾತ್ರ ಟಫ್ ಇದೆ ಎಂದು ಸಮರ್ಥಿಸಿಕೊಂಡರು.
ಪ್ರಧಾನಿ ಮೋದಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ:ಚುನಾವಣೆ ಹಿನ್ನೆಲೆ ಹಲವು ಜಿಲ್ಲೆಗಳಿಗೆ ತೆರಳಿ ಸಮೀಕ್ಷೆ ಮಾಡಿದ್ದೇನೆ. ರಾಜ್ಯಾದ್ಯಂತ ಬಿಜೆಪಿ ಕರೆಂಟ್ ಇದೆ. ಪ್ರಧಾನಿ ಮೋದಿ ಸಮಾವೇಶದಲ್ಲಿ ಲಕ್ಷಾಂತರ ಜನ ಭಾಗಿಯಾಗಿದ್ದಾರೆ. ಇಂದು ಬೆಂಗಳೂರಿನಲ್ಲಿಯೂ ಪ್ರಧಾನಿ ಮೋದಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ದಿನೇ ದಿನೆ ಕಾಂಗ್ರೆಸ್ ಗ್ರಾಫ್, ಜನಪ್ರಿಯತೆ ಕುಸಿಯುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಲಿದೆ. ಪ್ರಧಾನಿ ಮೋದಿ, ಕೆಂದ್ರ ಗೃಹಸಚಿವ ಅಮಿತ್ ಶಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಮಾವೇಶ ಯಶಸ್ವಿಯಾಗಿವೆ. ಬಿಜೆಪಿ ಪ್ರಚಂಡ ಬಹುಮತದಿಂದ ಜಯ ಗಳಿಸುವ ಬಗ್ಗೆ ಜನರ ಸ್ಪಷ್ಟ ಸಂದೇಶವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕದ ಸಮಗ್ರ ಅಭಿವೃದ್ಧಿ ಆಗಲಿದೆ: ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಪಿಎಫ್ಐ ಜಾಲ ವಿಸ್ತರಣೆ ಆಗಿತ್ತು. ಅವರ ಆಡಳಿತದ ಅವಧಿಯಲ್ಲಿ ದಂಗೆ ಆಗುತ್ತಿತ್ತು. 23 ಹಿಂದೂಗಳ ಹತ್ಯೆಯಾಗಿದೆ. ಅವರ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಕಾಂಗ್ರೆಸ್ ಸರ್ಕಾರದಲ್ಲಿ ಹಗರಣಗಳ ಮೇಲೆ ಹಗರಣ ಆಗಿದ್ದವು. ಸಿದ್ದರಾಮಯ್ಯ ಆಡಳಿತ ನೆನೆದ್ರೆ ಈಗಲೂ ಕರ್ನಾಟಕದ ಜನರಲ್ಲಿ ಭಯ ಶುರುವಾಗುತ್ತೆ. ಹೀಗಾಗಿ ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕದ ಸಮಗ್ರ ಅಭಿವೃದ್ಧಿ ಆಗಲಿದೆ ಎಂದು ಅರುಣ್ ಸಿಂಗ್ ಅವರು ಹೇಳಿದರು.