ಬೆಂಗಳೂರು :ರಾಜಧಾನಿ ಬೆಂಗಳೂರು ಹೊರಭಾಗದಲ್ಲೂ ಸ್ಟಾರ್ಟ್ ಅಪ್ ನೆಲೆಯೂರಲು ಪ್ರೋತ್ಸಾಹ ನೀಡುವ ನೂತನ ಸ್ಟಾರ್ಟ್ ಅಪ್ ನೀತಿಗೆ ಗುರುವಾರ ನಡೆದ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರ ನಗರಗಳಲ್ಲಿ ಸ್ಟಾರ್ಟ್ಅಪ್ ಆರಂಭಿಸುವವರಿಗೆ ಅನೇಕ ಪ್ರೋತ್ಸಾಹಕ ಯೋಜನೆ ಪ್ರಕಟಿಸುವ ಪ್ರಸ್ತಾಪ ಮಾಡಲಾಗಿದೆ. ಈ ಮೂಲಕ ಬೆಂಗಳೂರು ಹೊರತುಪಡಿಸಿ ಇತರ ನಗರಗಳಲ್ಲಿ ಸ್ಟಾರ್ಟ್ಅಪ್ಗಳು ಸ್ಥಾಪನೆಯಾಗಿ ಅಲ್ಲಿ ಉದ್ಯೋಗ ಸೃಷ್ಟಿಯಾಗಬೇಕು ಆ ಮೂಲಕ ಬೆಂಗಳೂರಿನ ಮೇಲೆ ಒತ್ತಡ ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ.
2027ರ ಹೊತ್ತಿಗೆ ರಾಜ್ಯದಲ್ಲಿ 25 ಸಾವಿರ ನವೋದ್ಯಮಗಳು ನೆಲೆಯೂರುವಂತೆ ಮಾಡುವ ಗುರಿಯುಳ್ಳ 2022-27ರ ನಡುವಿನ ಐದು ವರ್ಷಗಳ ಅವಧಿಯ ಹೊಸ ಸ್ಟಾರ್ಟಪ್ ನೀತಿಗೆ ಇದಾಗಿದೆ. ರಾಜ್ಯದಲ್ಲಿ ಸದ್ಯಕ್ಕೆ 15 ಸಾವಿರ ಸ್ಟಾರ್ಟಪ್‌ಗಳಿವೆ. ಹೊಸ ನೀತಿಯಿಂದಾಗಿ ಇನ್ನೂ 10 ಸಾವಿರ ನವೋದ್ಯಮಗಳು ನಮ್ಮಲ್ಲಿ ಅಸ್ತಿತ್ವಕ್ಕೆ ಬರಲಿವೆ. ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ರೂಪಿಸಿರುವ ಈ ನೀತಿಯು ಕರ್ನಾಟಕವನ್ನು ದೇಶದ ಸ್ಟಾರ್ಟಪ್ ವಲಯದಲ್ಲಿ 'ಚಾಂಪಿಯನ್ ರಾಜ್ಯ'ವನ್ನಾಗಿ ಪ್ರತಿಷ್ಠಾಪಿಸುವ ಗುರಿ ಹೊಂದಿದೆ.
ಹೊಸ ನೀತಿಯು ಮುಖ್ಯವಾಗಿ ಬೆಂಗಳೂರಿನಿಂದ ಹೊರಗಿರುವ ತಂತ್ರಜ್ಞಾನ ಕ್ಲಸ್ಟರ್ಗಳಲ್ಲಿ ನವೋದ್ಯಮಗಳನ್ನು ಪ್ರೋತ್ಸಾಹಿಸಲಿದ್ದು, ಇದು ನನಸಾಗುವಂಥ ಕಾರ್ಯ ಪರಿಸರವನ್ನು ನಿರ್ಮಿಸಲಿದೆ. ಜತೆಗೆ ಸಾಮಾಜಿಕ ಉದ್ಯಮಶೀಲತೆ, ಅಧುನಿಕ ತಂತ್ರಜ್ಞಾನ ಮತ್ತು ಸಾಮಾಜಿಕ ಆಡಳಿತದಲ್ಲಿ ನಾವೀನ್ಯತೆಯ ತಂತ್ರಜ್ಞಾನ ಕ್ಷೇತ್ರಗಳಿಗೆ ಇದು ಇಂಬು ನೀಡಲಿದೆ. ಈ ಮೂಲಕ ಈಗ ನಾವು ಎದುರಿಸುತ್ತಿರುವ ಪರಿಸರ, ಸಾಮಾಜಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಒಟ್ಟು 9 ಅಂಶಗಳ ಆಧಾರದ ಮೇಲೆ ರೂಪಿಸಿರುವ ಈ ನೀತಿಯು ಸರಕಾರಿ ಸಂಸ್ಥೆಗಳಲ್ಲಿ ಮೂಲಸೌಲಭ್ಯವನ್ನು ಅಭಿವೃದ್ಧಿ ಪಡಿಸುವ ಮತ್ತು 'ಬಿಯಾಂಡ್ ಬೆಂಗಳೂರು' ಉಪಕ್ರಮವನ್ನು ಸಾಕಾರಗೊಳಿಸುವ ಗುರಿಗಳನ್ನೂ ಹೊಂದಿದೆ.
ಸ್ಕ್ರ್ಯಾಪ್ ನೀತಿ 2022ಗೆ ಅನುಮೋದನೆ :ನೋಂದಾಯಿತ ಹಳೆಯ ವಾಹನಗಳನ್ನು ನಾಶಪಡಿಸುವ ನೀತಿ 2022ಕ್ಕೆ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಆ ಮೂಲಕ ಕೇಂದ್ರ ಸರ್ಕಾರದ ನೀತಿಯನ್ನು ರಾಜ್ಯದಲ್ಲೂ ಜಾರಿಗೊಳಿಸಲಾಗುತ್ತಿದೆ. ಅದರಂತೆ 15 ವರ್ಷ ಹಳೆಯದಾದ ವಾಹನಗಳನ್ನು ನಾಶ ಪಡಿಸುವ ನೀತಿ ಇದಾಗಿದೆ. ಈಗಾಗಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ 15 ವರ್ಷ ಪೂರೈಸಿದ ಎಲ್ಲಾ ಸರ್ಕಾರಿ ವಾಹನಗಳನ್ನು ನಾಶ ಪಡಿಸುವುದಾಗಿ ಘೊಷಿಸಿದ್ದರು. ಇದರ ಬೆನ್ನಲ್ಲೇ ರಾಜ್ಯದಲ್ಲೂ ಸ್ಕ್ರ್ಯಾಪ್ ನೀತಿ ಜಾರಿಗೊಳಿಸಲು ಇದೀಗ ಮುಂದಾಗಿದೆ.
- ಸಂಪುಟದ ಇತರೆ ತೀರ್ಮಾನಗಳೇನು:
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ 2022ರ ಅನುಮೋದನೆ - ಬೆಂಗಳೂರು ನಗರ ವ್ಯಾಪ್ತಿಯ ಕೆ.ಜಿ. ಹಳ್ಳಿ ಮತ್ತು ಡಿ.ಜೆ. ಹಳ್ಳಿಯಲ್ಲಿ 11.08.2020 ರಂದು ನಡೆದ ಅಹಿತಕರ ಘಟನೆಗಳ ಸಂಬಂಧ ಮ್ಯಾಜಿಸ್ಟೀರಿಯಲ್ ವಿಚಾರಣಾ ವರದಿಗೆ ಅಸ್ತು
- ವಿದ್ಯನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿ ಕರ್ನಾಟಕ ಸ್ಟಾರ್ಟ್ ಅಪ್ ನೀತಿ 2022-2027 ಅನುಮೋದನೆ
- ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಮೈಪಾಲ ಎಂಬಲ್ಲಿ ಸೇತುವ ಸಹಿತ ಕಿಂಡಿ ಅಣೆಕಟ್ಟನ್ನು ರೂ.72 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ
- ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲ್ಲೂಕು, ಕುಮದ್ವತಿ ನದಿಯಿಂದ ಕೊಪ್ಪದ ಕರೆಗೆ ನೀರನ್ನು ತುಂಬಿಸುವ ಏತ ನೀರಾವರಿ ಯೋಜನೆಯ ರೂ. 11.87 ಕೋಟಿಗಳ ಮೊತ್ತದ ಪರಿಷ್ಕೃತ ಅಂದಾಜಿಗೆ ಅನುಮೋದನೆ
- ಉಡುಪಿ ಜಿಲ್ಲೆ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಡಿ ಮಹಾಲಿಂಗೇಶ್ವರ ಏತ ನೀರಾವರಿ ಯೋಜನೆಯನ್ನು 72 ಕೋಟಿ ರೂ. ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ
- 2022-23ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಯಿಂದ 11 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಶಾಲೆಗಳನ್ನು ರೂ. 198 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ
- ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ಪ್ಲಾಂಟೇಶನ್ ಬೆಳೆಗಳನ್ನು ಬೆಳೆಯುತ್ತಿರುವವರಿಗೆ ಅಂತಹ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ನೀಡುವ ಕುರಿತಾದ "ಕರ್ನಾಟಕ ಭೂ ಕಂದಾಯ (3ನೇ ತಿದ್ದುಪಡಿ) ವಿಧೇಯಕ, 2022ಗೆ ಅನುಮೋದನೆ
- ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಮೇಳವಂಕಿ ಹಾಗೂ ಇತರೆ 40 ಗ್ರಾಮಗಳಿಗೆ (86' ಜನವಸತಿಗಳು) ಹಾಗೂ ಮೂಡಲಗಿ ತಾಲ್ಲೂಕಿನ 32 ಗ್ರಾಮಗಳಿಗೆ (62 ಜನವಸತಿಗಳು) DBOT ಆಧಾರದ ಮೇಲೆ ಜಲ ಜೀವನ್ ಮಿಷನ್ ಯೋಜನಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಒಟ್ಟು ರೂ. 475 ಕೋಟಿಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ ನೀಡುವ ಬಗ್ಗೆ ಆಡಳಿತಾತ್ಮಕ ಅನುಮೋದನೆ
- 2022-23ನೇ ಸಾಲಿಗೆ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳು, ಪ್ರೌಢ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರೂ.100 ಕೋಟಿಗಳ ಅಂದಾಜು ವೆಚ್ಚದಲ್ಲಿ ಪೀಠೋಪಕರಣಗಳನ್ನು ಒದಗಿಸಲು ಅಸ್ತು
- 2022-23ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 620 ವಿವಿಧ ಮಾದರಿಯ ಹೊಸ ಬಿ.ಎಸ್-vi ಬಸ್ಸುಗಳನ್ನು ರೂ. 269.75 ಕೋಟಿಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ
- 2022-23ನೇ ಸಾಲಿಗೆ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳು, ಪ್ರೌಢ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರೂ.100 ಕೋಟಿಗಳ ಅಂದಾಜು ವೆಚ್ಚದಲ್ಲಿ ಪೀಠೋಪಕರಣಗಳನ್ನು ಒದಗಿಸಲು ಅಸ್ತು
- ಬೆಂಗಳೂರು ಜಲಮಂಡಳಿಯ ಸಮತೋಲನ ಜಲಾಶಯ (ಎಸ್.ಬಿ.ಆರ್)ನಿಂದ ನೆಟ್ಕಲ್ ಸಮತೋಲನ ಜಲಾಶಯ (ಎನ್.ಬಿ.ಅರ್)ವರೆಗೆ ಸುಮಾರು 6.15 ಕಿ.ಮೀ. ಉದ್ದದ 3,000 ಮಿ.ಮೀ. ವ್ಯಾಸದ ಕಚ್ಚಾ ನೀರು ಸರಬರಾಜು ಮಾಡುವ ಉಕ್ಕಿನ (Mild Steel) ಕೊಳವೆ ಮಾರ್ಗವನ್ನು ಜೋಡಿಸುವ ರೂ. 145.62 ಕೋಟಿಗಳ ಅಂದಾಜು ಪಟ್ಟಿಗೆ ಅಡಳಿತಾತ್ಮಕ ಅನುಮೋದನೆ
- ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ-1ರ ಪರಿಷ್ಕೃತ ಯೋಜನಾ ವೆಚ್ಚ ರೂ. 14133.17 ಕೋಟಿಗಳಿಗೆ ಹಾಗೂ ಪರಿಷ್ಕೃತ ಹಣಕಾಸು ಮಾದರಿಗೆ ಅನುಮೋದನೆ
- ಮಂಗಳೂರು ಮಹಾನಗರ ಪಾಲಿಕೆಯ ಸುರತ್ಕಲ್ ಮಾರುಕಟ್ಟೆ ಸಂಕೀರ್ಣ ಕಟ್ಟಡ ನಿರ್ಮಾಣ ಯೋಜನೆಯ 82 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ
- ಸ್ಥಳೀಯ ಯೋಜನಾ ಪ್ರದೇಶದ ಹೊರಭಾಗದಲ್ಲಿ ಬರುವ ನಗರ ಸ್ಥಳೀಯ ಸಂಸ್ಥೆಗಳು 22.03.2017ರ ಪೂರ್ವದಲ್ಲಿ ತೆರದಿರುವ ಖಾತೆಗಳನ್ನು ಇ-ಆಸ್ತಿ ತಂತ್ರಾಂಶದಲ್ಲಿ ಮುಂದುವರೆಸಲು ಹಾಗೂ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯ ಹೊರಭಾಗದಲ್ಲಿ ಬರುವ ಗ್ರಾಮ ಪಂಚಾಯಿತಿಗಳನ್ನು ನಗರ ಸ್ಥಳೀಯ ಸಂಸ್ಥೆಗಳಾಗಿ ಮೇಲ್ದರ್ಜೆಗೇರಿಸಿದ ತರುವಾಯ ಈ ಹಿಂದೆ ಗ್ರಾಮ ಪಂಚಾಯಿತಿಗಳು ತಂತ್ರಾಂಶದಡಿಯಲ್ಲಿ ನಿರ್ವಹಿಸಿದ್ಧ ಖಾತೆಗಳನ್ನು ಇ-ಅಸ್ತಿ ತಂತ್ರಾಂಶದಲ್ಲಿ ದಾಖಲಿಸಲು ಅನುನೋದನೆ
- ವಿಶ್ವಬ್ಯಾಂಕ್ ನೆರವಿನೊಂದಿಗೆ ಕರ್ನಾಟಕ ನಗರ ನೀರು ಸರಬರಾಜು ಆಧುನಿಕರಣ ಯೋಜನೆ (ಕೆಯುಡಬ್ಲ್ಯೂಎಸ್ಎಂಪಿ)ಯ ಅನುಷ್ಠಾನದ 3740 ಕೋಟಿಗಳ ಪರಿಷ್ಕೃತ ಯೋಜನಾ ವೆಚ್ಚಕ್ಕೆ ಅನುಮೋದನೆ
- ಕೇಂದ್ರ ಸರ್ಕಾರದ ಪ್ರಾಯೋಜಿತ ಗಡಿ ಪ್ರದೇಶ ಯೋಜನೆಯ ಅನುಷ್ಠಾನ ಸಂಬಂಧ ಅನೇಕಲ್ ತಾಲ್ಲೂಕಿನ ಬಾಲವಾಡಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನಂತರ 1.04.2015 ರಿಂದ ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಸಲಹಾ ಮಂಡಳಿಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ 6 ಸಿಬ್ಬಂದಿಗಳನ್ನು ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ' ಸೇವೆಗಳಲ್ಲಿ ಕೆ.ಎ.ಟಿ ಹಾಗೂ ಉಚ್ಛ ನ್ಯಾಯಾಲಯದ ಆದೇಶದಂತೆ ಖಾಯಂ ಆಗಿ 1.04.2015 ರಿಂದ ವಿಲೀನಗೊಳಿಸಲು ಪ್ರಸ್ತಾಪಿಸಲಾಗಿರುವ ವಿಶೇಷ ವಿಲೀನಾತಿ ನಿಯಮಗಳಿಗೆ ಅನುಮೋದನೆ
- ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ 5701.38 ಕೋಟಿ ವೆಚ್ಚದ ನೀರಾವರಿ ಯೋಜನೆಗಳಿಗೆ ಸಚಿವ ಸಂಪುಟದ ಸಭೆಯಲ್ಲಿ ಅನುಮೋದನೆ. ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಒಟ್ಟು 13 ಅತ್ಯಂತ ಪ್ರಮುಖ ನೀರಾವರಿ ಯೋಜನೆಗಳಿಗೆ ಇಂದಿನ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಇದರಿಂದ ಒಟ್ಟು 5701.38 ಕೋಟಿ ರೂಪಾಯಿಗಳ ವೆಚ್ಚದ ಮಹತ್ವದ ಯೋಜನೆಗೆ ಅನುಮೋದನೆ
ಇದನ್ನೂ ಓದಿ :ರಾಜ್ಯದಲ್ಲೂ ಸ್ಕ್ರ್ಯಾಪ್ ನೀತಿ ಜಾರಿ: 15 ವರ್ಷಕ್ಕಿಂತ ಹಳೆಯ ವಾಹನಗಳಿನ್ನು ಗುಜರಿಗೆ