ಕರ್ನಾಟಕ

karnataka

ETV Bharat / state

ಸೋರುತ್ತಿದ್ದ ಕೊಠಡಿಯಲ್ಲಿ SSLC ಪರೀಕ್ಷೆ: ವಿದ್ಯಾರ್ಥಿಗಳನ್ನು ಶಿಫ್ಟ್ ಮಾಡಿಸಿದ ಬೆಳಗಾವಿ ಡಿಸಿ - ಸರ್ದಾರ್ ಹೈಸ್ಕೂಲ್

SSLC ಪರೀಕ್ಷಾ ಕೊಠಡಿ ಸೋರುತ್ತಿರುವ ಬಗ್ಗೆ ಮಾಹಿತಿ ಪಡೆದ ಬೆಳಗಾವಿ ಡಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಕ್ಷಣ ಪರೀಕ್ಷಾರ್ಥಿಗಳನ್ನು ಇನ್ನೊಂದು ಕೊಠಡಿಗೆ ಸ್ಥಳಾಂತರಿಸಲು ಸೂಚಿಸಿದರು.

DC Visited Exam Center in Belgavi
ಪರೀಕ್ಷಾ ಕೇಂದ್ರಕ್ಕೆ ಡಿಸಿ ಎಂ.ಜಿ.ಹಿರೇಮಠ ಭೇಟಿ ನೀಡಿ ಪರಿಶೀಲನೆ ನಡೆಸಿದರು

By

Published : Jul 22, 2021, 11:57 AM IST

ಬೆಳಗಾವಿ: ನಿರಂತರ ಮಳೆಗೆ ನಗರದ ಸರ್ದಾರ್ ಹೈಸ್ಕೂಲ್​ನ ಪರೀಕ್ಷಾ ಕೇಂದ್ರದ ಕೊಠಡಿಗಳು ಸೋರುತ್ತಿರುವ ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಪರಿಶೀಲನೆ ನಡೆಸಿದರು. ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು‌.

ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಎಡೆಬಿಡದೇ ಮಳೆ ಸುರಿಯುತ್ತಿದೆ. ವರುಣನ ಅಬ್ಬರದ ನಡುವೆಯೂ ವಿದ್ಯಾರ್ಥಿಗಳು ಛತ್ರಿ ಹಿಡಿದುಕೊಂಡು, ಆಟೋಗಳಲ್ಲಿ ಬಂದು ಕೊನೆಯ ಎಸ್ಎಸ್ಎಲ್​ಸಿ ಪರೀಕ್ಷೆಗೆ ಹುರುಪಿನಿಂದ ಹಾಜರಾಗಿದ್ದಾರೆ. ಪರೀಕ್ಷೆ ಆರಂಭವಾಗುವ ಮುನ್ನ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಪರೀಕ್ಷಾ ಕೇಂದ್ರಗಳ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದುಕೊಂಡರು. ಸೋರುತ್ತಿರುವ ಕೊಠಡಿಯಲ್ಲಿ ಪರೀಕ್ಷೆ ನಡೆಸದಂತೆ ಸೂಚಿಸಿದರು.

ಪರೀಕ್ಷಾ ಕೇಂದ್ರಕ್ಕೆ ಡಿಸಿ ಎಂ.ಜಿ.ಹಿರೇಮಠ ಭೇಟಿ ನೀಡಿ ಪರಿಶೀಲನೆ ನಡೆಸಿದರು

ಓದಿ : ಇಂದು SSLC 2ನೇ ಪರೀಕ್ಷೆ: ಎಕ್ಸಾಂ ಚೆನ್ನಾಗಿ ಮಾಡಿ ಎಂದ ಸುರೇಶ್ ಕುಮಾರ್

ಬಳಿಕ ಮಾತನಾಡಿದ ಅವರು, ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ ಅವರಿಗೆ ಫೋನ್ ಕರೆ ಮಾಡಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಈಗಾಗಲೇ ಸುರಕ್ಷಿತವಾಗಿ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಕಳುಹಿಸಲಾಗಿದೆ. ಚಿಕ್ಕೋಡಿ ವಿಭಾಗದಲ್ಲಿ ಸಣ್ಣ ಪ್ರಮಾಣದ ಏಳೆಂಟು ಸೇತುವೆಗಳು ಮುಳುಗಡೆಯಾಗಿವೆ. ಆದರೆ, ಎಸ್​ಎಸ್​ಎಸ್​ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಪರ್ಯಾಯ ರಸ್ತೆಗಳಿವೆ ಎಂದರು.

ಸೋರುತ್ತಿದೆ ಪರೀಕ್ಷಾ ಕೊಠಡಿ:ನಗರದ ಸರ್ದಾರ್ ಶಾಲೆಯ ಪರೀಕ್ಷಾ ಕೇಂದ್ರದ‌ ಎರಡು ಕೊಠಡಿಗಳು ಹಳೆಯದಾಗಿವೆ. ಹೀಗಾಗಿ, ಮೊದಲ ಪರೀಕ್ಷೆಯ ದಿನದಂದೇ ಅಲ್ಲಿನ‌ ಪರೀಕ್ಷಾ ಕೊಠಡಿಗಳು ಸೋರುತ್ತಿದ್ದವು. ಈ ಬಗ್ಗೆ ಪರ್ಯಾಯ ವ್ಯವಸ್ಥೆ ‌ಕೈಗೊಳ್ಳುವಂತೆ ಡಿಸಿ ಸೂಚನೆ ನೀಡಿದ್ದರು. ಆದರೂ, ಎಚ್ಚೆತ್ತುಕೊಳ್ಳದ ಸರ್ದಾರ್ ಶಾಲೆಯ ಆಡಳಿತ ಮಂಡಳಿ, ‌ಅದೇ ಕೊಠಡಿಯಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಿದ್ದರು.

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ‌ನಿರಂತರ ಮಳೆಗೆ ಪರೀಕ್ಷಾ ಕೊಠಡಿ ನೀರಿನಿಂದ ತುಂಬಿತ್ತು. ಈ ಬಗ್ಗೆ ಮಾಧ್ಯಮಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತಿದ್ದಂತೆ ಸೋರುತ್ತಿದ್ದ ಕೊಠಡಿಯಲ್ಲಿದ್ದ ವಿದ್ಯಾರ್ಥಿಗಳನ್ನು ಬೇರೊಂದು ಹಾಲ್​ಗೆ ಸ್ಥಳಾಂತರಿಸಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿ ಕೊಟ್ಟಿದ್ದಾರೆ.

ಇನ್ನೂ ಎರಡು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ, ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಅಗತ್ಯ ಮುಂಜಾಗ್ರತಾ ‌ಕ್ರಮ ಕೈಗೊಳ್ಳಲಾಗಿದೆ‌ ಎಂದು ಡಿಸಿ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details