ಬೆಳಗಾವಿ/ಚಿಕ್ಕೋಡಿ : ಶೈಕ್ಷಣಿಕ ಜಿಲ್ಲೆಗೆ ಈರೇಶ ಸಿದ್ದಮಲ್ಲಾ ಜಂಬಗಿ ಎಂಬ ವಿದ್ಯಾರ್ಥಿ 625 ಕ್ಕೆ 622 ಅಂಕ ಪಡೆಯುವುದರ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾನೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೃಷ್ಣಾ ಕಿತ್ತೂರ ಗ್ರಾಮದ ಶ್ರೀಲಕ್ಷ್ಮಿದೇವಿ ಕನ್ನಡ ಹೈಸ್ಕೂಲ್ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ಯುವಕ, ಕನ್ನಡಕ್ಕೆ 125, ಹಿಂದಿ ಹಾಗೂ ಸಮಾಜ ವಿಜ್ಞಾನಕ್ಕೆ 100, ಇಂಗ್ಲೀಷ್, ಗಣಿತ ಹಾಗೂ ವಿಜ್ಞಾನ ವಿಷಯಕ್ಕೆ 99 ಅಂಕ, ಒಟ್ಟು 625 ಪೈಕಿ 622 ಅಂಕ ಪಡೆಯುವುದರ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾನೆ.
ಟಾಪ್ 3 ಇದ್ದ ಚಿಕ್ಕೋಡಿ 13, 6ರಲ್ಲಿದ್ದ ಬೆಳಗಾವಿ 24ನೇ ಸ್ಥಾನ :
ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಿದ್ದು, ಕಳೆದೊಂದು ದಶಕಗಳಿಂದ ಉತ್ತಮ ಸಾಧನೆ ಮಾಡುತ್ತ ಬಂದಿದ್ದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಹಾಗೂ ಬೆಳಗಾವಿ ಜಿಲ್ಲೆಯ ಫಲಿತಾಂಶ ಈ ಸಲ ವಿಪರೀತ ಕುಸಿತ ಕಂಡಿದೆ.
ಕಳೆದ ಸಾಲಿನ ಫಲಿತಾಂಶದಲ್ಲಿ 3 ರ್ಯಾಂಕ್ ಹೊಂದಿದ್ದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಈ ಸಲ 13ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಕಳೆದ ವರ್ಷ 6ನೇ ಸ್ಥಾನದಲ್ಲಿದ್ದ ಬೆಳಗಾವಿ ಈ ಸಲ 24ನೇ ಸ್ಥಾನಕ್ಕೆ ಕುಸಿದಿದೆ. ಚಿಕ್ಕೋಡಿ ಕಳೆದ ವರ್ಷ ಶೇ.87.01 ಅಂಕಗಳ ಜತೆಗೆ ರಾಜ್ಯಕ್ಕೆ 3ನೇ ಸ್ಥಾನ ಹೊಂದಿತ್ತು. ಆದರೆ, ಈ ಸಲ ಶೇ. 3ರಷ್ಟು ಫಲಿತಾಂಶ ಕುಸಿತವಾಗಿದ್ದು, ಶೇ. 84.09 ರಷ್ಟು ಫಲಿತಾಂಶ ಪ್ರಕಟವಾಗಿದೆ.
ಕಳೆದ ವರ್ಷ ಶೇ. 84.77 ಅಂಕಗಳೊಂದಿಗೆ ರಾಜ್ಯಕ್ಕೆ 6ನೇ ರ್ಯಾಂಕ್ ಹೊಂದಿದ್ದ ಬೆಳಗಾವಿ ಜಿಲ್ಲೆ ಶೇ. 7ರಷ್ಟು ಫಲಿತಾಂಶ ಕುಸಿತ ಕಂಡಿದ್ದು, ಈ ವರ್ಷ ಶೇ.77.43 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.