ಚಿಕ್ಕೋಡಿ:ಸುಮಾರು 70 ವರ್ಷಗಳಿಂದ ಕಾಗವಾಡ ವಿಧಾನಸಭಾ ಕ್ಷೇತ್ರ ಅಭಿವೃದ್ಧಿ ಕಾಣದೆಯಿರುವುದರಿಂದ ಈ ಕ್ಷೇತ್ರದ ಅಭಿವೃದ್ಧಿಗೆ ನಾನು ನಿರ್ಣಯ ಕೈಗೊಂಡಿದ್ದೇನೆ ಎಂದು ಕಾಗವಾಡ ಅನರ್ಹ ಶಾಸಕ ಶ್ರೀಮಂತ್ ಪಾಟೀಲ್ ಹೇಳಿದರು.
ಕಾಗವಾಡ ಅನರ್ಹ ಶಾಸಕ ಶ್ರೀಮಂತ್ ಪಾಟೀಲ್ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ ಗ್ರಾಮದಲ್ಲಿ ನಿಪ್ಪಾಣಿ-ಕೊಟ್ಟಲಗಿ ರಾಜ್ಯ ಹೆದ್ದಾರಿ ಮಾರ್ಗದ ರಸ್ತೆ ಅಭಿವೃದ್ಧಿಗಾಗಿ 3.10 ಕೋಟಿ ರೂ. ಯೋಜನೆಯ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಗವಾಡ ವಿಧಾನಸಭಾ ಕ್ಷೇತ್ರ ಈವರೆಗೂ ಅಭಿವೃದ್ಧಿ ಕಂಡಿಲ್ಲ. ಇಲ್ಲಿಯ ರಸ್ತೆಗಳ ಅಭಿವೃದ್ಧಿ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ 3 ತಿಂಗಳಿನಲ್ಲಿ 90 ಕೋಟಿ ವಿಶೇಷ ಅನುದಾನ ಪಡೆದುಕೊಂಡಿದ್ದೇನೆ ಎಂದರು.
ಬೆಳಗಾವಿಯಿಂದ ಅಥಣಿಗೆ ಸಂಪರ್ಕಿಸಲು ಕಾಗವಾಡ ಮುಖಾಂತರ ರಾಜ್ಯ ಹೆದ್ದಾರಿಯಿದ್ದರೂ ಸುಮಾರು 20 ಕಿ.ಮೀ ಅಂತರ ಕಡಿಮೆಯಾಗಲೆಂದು ಬೆಳಗಾವಿ-ಶಿರಗುಪ್ಪಿ ಮಾರ್ಗವಾಗಿ ಐನಾಪೂರ-ಅಥಣಿ ಸಂಪರ್ಕಿಸುವ ನಿಪ್ಪಾಣಿ-ಕೊಟ್ಟಲಗಿ ಮಾರ್ಗದ ಅಭಿವೃದ್ಧಿಗಾಗಿ 3 ಕೋಟಿ ರೂ. ಮಂಜೂರುಗೊಳಿಸಿದ್ದೇನೆ. ಈ ಕಾಮಗಾರಿಯಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದರು.
ಕಾಗವಾಡ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆಈವರೆಗಿನ ಶಾಸಕರುತಲೆಕೆಡಿಸಿಕೊಂಡಿಲ್ಲ. 70 ವರ್ಷ ಗತಿಸಿದರು ಅಭಿವೃದ್ಧಿ ಕಂಡಿಲ್ಲ. ಉಳಿದ ಕೆಲಸಗಳ ಬಗ್ಗೆ ಮಾಹಿತಿ ತೆಗೆದುಕೊಂಡು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೆ ತಂದು ವಿಶೇಷ ಅನುದಾನ ತಂದಿದ್ದೇನೆ. ಪಿಡ್ಲ್ಯೂಡಿ ಕಡೆಯಿಂದ 25 ಕೋಟಿ, ರಾಜ್ಯ ಹೆದ್ದಾರಿ ಇಲಾಖೆಯಿಂದ 20 ಕೋಟಿ, 45 ಕೋಟಿ ಹೆಚ್ಚುವರಿಯಾಗಿ ಒಟ್ಟು 95 ಕೋಟಿ ವಿಶೇಷ ಅನುದಾನ ಮಂಜೂರುಗೊಳಿಸಿಕೊಂಡು ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದೇನೆ ಎಂದರು.