ಚಿಕ್ಕೋಡಿ: ಕಳೆದ ತಿಂಗಳು ಚಿಕ್ಕೋಡಿ ಉಪವಿಭಾಗದ ಕ್ಷೇತ್ರವಾದ ಕಾಗವಾಡ ತಾಲೂಕಿನಲ್ಲಿ ಕೃಷ್ಣಾ ನದಿ ಪ್ರವಾಹದಿಂದ ನದಿ ಪಾತ್ರದ ಜನರಿಗೆ ಭಾರಿ ಪ್ರಮಾಣದ ಹಾನಿ ಸಂಭವಿಸಿದೆ. ಸರ್ಕಾರ ಪರಿಹಾರ ವಿತರಣೆ ಮಾಡದೆ ಹೋದರೆ ನನ್ನ ವೈಯಕ್ತಿಕ ಹಣವನ್ನು ನೆರೆ ಸಂತ್ರಸ್ತರಿಗೆ ವಿತರಣೆ ಮಾಡುತ್ತೇನೆ ಎಂದು ಮಾಜಿ ಸಚಿವರೂ ಆಗಿರುವ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಹೇಳಿದರು.
ಅವರು ಕಾಗವಾಡ ಕಚೇರಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು. ಈಗಾಗಲೇ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಳಗಾವಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಧಿಕಾರಿಗಳಿಗೆ ಆದೇಶ ಮಾಡಿದ್ದಾರೆ. ಆದರೆ, ಕೆಲವು ಕಾನೂನಾತ್ಮಕ ತೊಂದರೆಯಿಂದಾಗಿ ಕೆಲವು ನೆರೆ ಸಂತ್ರಸ್ತರಿಗೆ ತುರ್ತಾಗಿ ಹತ್ತು ಸಾವಿರ ರೂಪಾಯಿ ಧನಸಹಾಯ ಸಿಕ್ಕಿಲ್ಲ. ಇದರಿಂದ ಕೆಲವು ಗ್ರಾಮದಲ್ಲಿ ಪ್ರತಿಭಟನೆಗೆ ಮುಂದಾಗಿದ್ದು, ಅವರಿಗೆ ಸರ್ಕಾರದಿಂದ ಪರಿಹಾರ ಧನ ಸಹಾಯ ಮಾಡಲಾಗುತ್ತದೆ ಎಂದು ತಿಳಿಸಿದರು.