ಗೋಕಾಕ್: ಉಪಚುನಾವಣೆಯನ್ನು ಮಹಾಭಾರತಕ್ಕೆ ಹೋಲಿಕೆ ಮಾಡಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ನಾವು ಪಾಂಡವರು. ರಮೇಶ್ ಜಾರಕಿಹೊಳಿ ಕೌರವ. ಕೊನೆಗೆ ಗೆಲುವು ನಮ್ಮದೇ ಆಗಲಿದೆ ಎಂದಿದ್ದಾರೆ.
ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, 17 ಜನ ಶಾಸಕರು ಮಾತೃ ಪಕ್ಷಕ್ಕೆ ದ್ರೋಹ ಮಾಡಿ ಬೆನ್ನಿಗೆ ಚೂರಿ ಹಾಕಿದ್ದಾರೆ. ಲೋಕಸಭಾ ಚುನಾವಣೆ, ಪ್ರವಾಹ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ನಾಪತ್ತೆಯಾಗಿದ್ದರು. ಪ್ರವಾಹ ಸಂದರ್ಭದಲ್ಲಿ ಸತೀಶ್ ಜನರಿಗೆ ಆಪತ್ಬಾಂಧವರ ರೀತಿ ಬಂದು ಸಹಾಯ ಮಾಡಿದ್ದಾರೆ. ಸತೀಶ್ ಜಾರಕಿಹೊಳಿ ಮನಸ್ಸು ಮಾಡಿದ್ರೆ ಕಾಂಗ್ರೆಸ್ ಗೆಲುವು ನಿಶ್ಚಿತ. ಸತೀಶ ಜಾರಕಿಹೊಳಿ ಮತ್ತು ನನ್ನ ಸಚಿವ ಸ್ಥಾನ ಒಮ್ಮೆ ಹೋಗಿದೆ. ಸಚಿವ ಸ್ಥಾನ ಹೋಗೋ ಹಿಂದಿನ ದಿನ ಇದ್ರೇ ಇರಲಿ ಹೋದ್ರೆ ಹೊಗಲಿ ಅಂತಾ ನಾವಿಬ್ಬರೂ ಮಾತನಾದ್ದೆವು ಎಂದಿದ್ದಾರೆ.
ರಮೇಶ ಜಾರಕಿಹೊಳಿ ಚುನಾವಣೆಯನ್ನು ಲಖನ್ ಮಾಡುತ್ತಿದ್ದರು. ರಮೇಶ್ ಅವರನ್ನ ಸೋಲಿಸುವ ತಂತ್ರ ಲಖನ್‌ಗೆ ಗೊತ್ತಿದೆ. ಕಾಂಗ್ರೆಸ್ ಪಕ್ಷವನ್ನು ರಮೇಶ್ ಯಾಕೆ ಬಿಟ್ಟರು ಎಂಬುದು ಇಂದಿಗೂ ಅರ್ಥ ಆಗುತ್ತಿಲ್ಲ. ಮತದಾರರಿಗೆ ಈ ಸಂದರ್ಭ ಬಂದಿದ್ದು ದುರ್ದೈವ. ಚುನಾವಣೆ ನಿಲ್ಲುವ ಅವಕಾಶ ಸಿಕ್ಕಿದೆ. ಆದರೆ, ಜನರ ಮುಂದೆ ರಮೇಶ್ ಹೇಗೆ ಮತ ಕೇಳುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.