ಬೆಳಗಾವಿ:ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ನಡೆಯಲು ಇನ್ನೂ ಎರಡು ವರ್ಷ ಇದೆ. ಹಾದಿ ಬೀದಿಯಲ್ಲಿ ಈಗಲೇ ಪಕ್ಷದ ನಾಯಕತ್ವದ ಬಗ್ಗೆ ಚರ್ಚಿಸುವುದು ಸರಿಯಲ್ಲ. ನಮ್ಮ ಪಕ್ಷದಲ್ಲಿ ಸದ್ಯ ನಡೆಯುತ್ತಿರುವ ಬೆಳವಣಿಗೆ ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದಂತಾಗಿದೆ ಎಂದು ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಶರದ್ ಪವಾರ್ ಜೊತೆ ರಾಹುಲ್ ಕೈಜೋಡಿಸಲಿ, ಶಿವಸೇನೆ ಪರ ಬ್ಯಾಟ್ ಬೀಸಿದ ದಿನೇಶ್ ಗುಂಡೂರಾವ್
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಹಾಗೂ ಸಿಎಲ್ಪಿ ನಾಯಕ ಸಿದ್ದರಾಮಯ್ಯ ಕೂಡ ಹಾದಿಬೀದಿಯಲ್ಲಿ ಈ ಬಗ್ಗೆ ಚರ್ಚಿಸದಂತೆ ಸೂಚನೆ ನೀಡಿದ್ದಾರೆ. ಅಲ್ಲದೆ ಮುಂದಿನ ಸಿಎಂ ಬಗ್ಗೆ ಈಗಲೇ ಚರ್ಚಿಸುವುದು ಸೂಕ್ತವಲ್ಲ. ಬಿಜೆಪಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಬಿಜೆಪಿ ಸರ್ಕಾರ ಕಿತ್ತು ಹಾಕಲು ನಾವೆಲ್ಲರೂ ಶ್ರಮಿಸಬೇಕು. ನಂತರ ಕಾಂಗ್ರೆಸ್ ಬಹುಮತ ಗಳಿಸಿದ್ರೆ ಸಿಎಲ್ಪಿ ಸಭೆಯಲ್ಲಿ ಮುಖ್ಯಮಂತ್ರಿ ಯಾರಾಗಬೇಕು ಎಂಬ ಚರ್ಚೆ ನಡೆಯುತ್ತದೆ. ಹೈಕಮಾಂಡ್ ನಾಯಕರೂ ಸಭೆಯಲ್ಲಿದ್ದು, ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುತ್ತಾರೆ. ನಂತರ ರಾಜ್ಯದ ಸಿಎಂ ಆಗಬಹುದು. ಇಂದು ಹಾದಿ ಬೀದಿಯಲ್ಲಿ ಮಾತನಾಡುವವರು ಮುಂದೆ ಶಾಸಕರಾಗಬೇಕು. ಅಂದಾಗಲೇ ಆಗ ನಾಯಕತ್ವದ ಬಗ್ಗೆ ಚರ್ಚಿಸಲು ಅರ್ಹತೆ ಹೊಂದುತ್ತಾರೆ ಎಂದರು.
ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಸಿದ್ದರಾಮಯ್ಯ ಹಾಗೂ ಡಿಕೆಶಿ ಮಧ್ಯೆ ಹೊಂದಾಣಿಕೆ ಉತ್ತಮವಾಗಿದೆ. ನಮ್ಮಲ್ಲಿ ಬಣಗಳಿಲ್ಲ, ಭಿನ್ನಾಭಿಪ್ರಾಯವೂ ಇಲ್ಲ. ನಾಯಕತ್ವದ ಬಗ್ಗೆ ಚರ್ಚೆ ಈಗ ಬೇಡ ಎಂದು ಡಿಕೆಶಿ ಸಲಹೆ ಕೊಟ್ಟಿದ್ದಾರೆ. ಪಕ್ಷದ ಸೂಚನೆಯೂ ಹೀಗೆ ಇದೆ. ಮುಂದಿನ ಚುನಾವಣೆಯಲ್ಲಿ 113 ಕಾಂಗ್ರೆಸ್ ಶಾಸಕರು ಗೆಲ್ಲಬೇಕು. ಸಿಎಲ್ಪಿ ಸಭೆಯಲ್ಲಿ ಸಿಎಂ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತದೆ. ಯಾರದೇ ಮೇಲೆ ಪ್ರೀತಿ, ವಿಶ್ವಾಸ, ನಂಬಿಕೆ ಇರಲಿ. ಆದರೆ, ಹಾದಿ ಬೀದಿಯಲ್ಲಿ ಮುಂದಿನ ಮುಖ್ಯಮಂತ್ರಿಯ ಹೆಸರು ಹೇಳುವುದು ಸರಿಯಲ್ಲ. ಆ ರೀತಿಯ ಹೇಳಿಕೆ ನೀಡದಂತೆ ನಮ್ಮ ಶಾಸಕರಲ್ಲಿ ನಾನೂ ಮನವಿ ಮಾಡುತ್ತೇನೆ ಎಂದರು.
ಬಿಜೆಪಿ ಒಡೆದ ಮನೆ:ಕೋವಿಡ್ ನಿರ್ವಹಣೆ ಹೆಸರಲ್ಲಿ ಬಿಜೆಪಿ ಸರ್ಕಾರ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ನಡೆಸುತ್ತಿದೆ. ಬಿಜೆಪಿಯಲ್ಲಿರುವ ಯಾರೂ ಖುಷಿಯಿಂದಿಲ್ಲ. ಬಿಜೆಪಿ ಇದೀಗ ಒಡೆದ ಮನೆಯಾಗಿದೆ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಬಿಜೆಪಿಯಲ್ಲಿ ಒಕ್ಕಟ್ಟು ಇಲ್ಲ. ಬಿಜೆಪಿಯಿಂದ ಒಳ್ಳೆಯ ಆಡಳಿತ ನಿರೀಕ್ಷೆ ಅಸಾಧ್ಯ. ನಾವು ಐದು ವರ್ಷ ಯಾವುದೇ ಗೊಂದಲವಿಲ್ಲದೇ ಯಾರಿಗೂ ಅನ್ಯಾಯ ಆಗದಂತೆ ಆಡಳಿತ ನೀಡಿದ್ದೇವೆ. ಬಿಜೆಪಿಯಲ್ಲಿರುವ ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್, ರೇಣುಕಾಚಾರ್ಯ, ಹೆಚ್. ವಿಶ್ವನಾಥ್ ತಮ್ಮ ಅಸಮಾಧಾನ ನಿರಂತರವಾಗಿ ಹೊರಹಾಕುತ್ತಿದ್ದಾರೆ. ಇಷ್ಟು ಕೀಳುಮಟ್ಟದಲ್ಲಿ ಭ್ರಷ್ಟಾಚಾರಕ್ಕೆ ಇಳಿದಿರುವ ಸರ್ಕಾರವನ್ನು ನಾನು ಹಿಂದೆಂದೂ ನೋಡಿಯೇ ಇಲ್ಲ. ಪ್ರಬುದ್ಧ ಮತದಾರರು ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.