ಚಿಕ್ಕೋಡಿ(ಬೆಳಗಾವಿ): ದೇಶ, ವಿದೇಶಗಳಲ್ಲಿ ಹೆಸರುವಾಸಿಯಾಗಿರುವ ಕೊಲ್ಲಾಪುರ್ ತೊಗಲಿನ ಚಪ್ಪಲಿ ತಯಾರಕರ ಪರಿಸ್ಥಿತಿ ಸದ್ಯ ದುಸ್ಥಿತಿಯಾಗಿದ್ದು, ಸರ್ಕಾರವು ಬರುವ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಮೋದ್ಯೋಗ ನಡೆಸುತ್ತಿರುವ ಕುಟುಂಬಗಳ ಕುರಿತು ಚರ್ಚಿಸಿ ನಮಗೆ ನ್ಯಾಯ ಒದಗಿಸಿ ಕೊಡಬೇಕೆಂದು ಕುಶಲಕರ್ಮಿಗಳು ಒತ್ತಾಯಿಸುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಧುಬಾವಿ ಗ್ರಾಮ ಹಾಗೂ ತಾಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಪ್ಪಲಿಯನ್ನು ತಯಾರಿಸಿ ಮಾರುಕಟ್ಟೆಗಳಿಗೆ ಮಾರಾಟ ಮಾಡುತ್ತಾರೆ. ಆದರೆ ಆಧುನಿಕತೆಯಿಂದ ದಿನದಿನಕ್ಕೆ ಚರ್ಮದಿಂದ ತಯಾರಿಸಿದ ಚಪ್ಪಲಿ ಬೇಡಿಕೆ ಕಡಿಮೆಯಾಗುತ್ತಿದ್ದು ಮತ್ತು ಸರ್ಕಾರಗಳ ಹಿತಾಶಕ್ತಿ ಕೊರತೆಯಿಂದ ಚರ್ಮೋದ್ಯೋಗವನ್ನು ನಂಬಿಕೊಂಡಿರುವ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಆದಷ್ಟು ಬೇಗನೆ ಸರ್ಕಾರ ಪಾರಂಪರಿಕ ಕುಶಲಕರ್ಮಿಗಳ ನೆರವಿಗೆ ಬರುವಂತೆ ಮನವಿ ಮಾಡಿದ್ದಾರೆ.
ಅಖಿಲ ಕರ್ನಾಟಕ ಚರ್ಮಕಾಗ ಸಮಾಜ ಮಹಾ ಒಕ್ಕೂಟ ರಾಜ್ಯಾಧ್ಯಕ್ಷ ಡಾ.ಅನಿಲ್ ಸೌದಾಗರ್ ಮಾತನಾಡಿ, "ಕರ್ನಾಟಕ ರಾಜ್ಯದಲ್ಲಿ 18 ಲಕ್ಷ ಜನ ಚರ್ಮಕುಶಲಕರ್ಮಿಗಳಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 1 ಲಕ್ಷ 52 ಸಾವಿರ ಕುಟುಂಬಗಳು ವಾಸಿಸುತ್ತಿದ್ದಾರೆ. ಅಥಣಿ, ರಾಯಭಾಗ, ಬೆಳಗಾವಿ ಗ್ರಾಮೀಣ, ನಿಪ್ಪಾಣಿ, ಕಾಗವಾಡ ಭಾಗದಲ್ಲಿ ಚರ್ಮ ಉದ್ಯೋಗವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಲ್ಲಿ ತಯಾರಾಗಿರುವ ಚಪ್ಪಲಿಗಳು ನೆದರ್ಲೆಂಡ್, ಇಟಲಿ, ಸಿಂಗಾಪುರ್, ಬ್ಯಾಂಕಾಕ್, ಅಮೆರಿಕ, ಲಂಡನ್‌ಗೆ ರಫ್ತು ಮಾಡಿ ಹೆಸರುವಾಸಿಯಾಗಿವೆ. ದೇಶದಲ್ಲಿ ಬಾಂಬೆ, ಕೋಲ್ಕತ್ತಾ, ಚೆನ್ನೈ, ಅಹಮದಾಬಾದ್, ದೆಹಲಿ ಮಾರುಕಟ್ಟೆಗಳಿಗೆ ಸದ್ಯ ನಾವು ರಫ್ತು ಮಾಡುತ್ತೇವೆ. ಆದರೆ ಸರಕಾರ ವಿದೇಶಗಳಿಗೆ ರಫ್ತು ನಿಲ್ಲಿಸುವುದರಿಂದ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದೆ. ಇದರಿಂದ ತಯಾರಕರಿಗೆ ತಾವು ಮಾಡಿದ ಖರ್ಚು ಭರಿಸುವುದು ಹೊರೆಯಾಗಿದೆ. ಆದಷ್ಟು ಬೇಗನೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಚರ್ಮೋದ್ಯೋಗ ಮೇಲೆ ವಿಧಿಸಿದ ಜಿಎಸ್‌ಟಿಯನ್ನು ಹಿಂಪಡೆದು, ಮತ್ತೆ ವಿದೇಶಗಳಿಗೆ ರಪ್ತು ಮಾಡಲು ಅನುಮತಿ ನೀಡಬೇಕು" ಎಂದು ಕೇಳಿಕೊಂಡರು.
"ಕೊಲ್ಲಾಪುರಿ ಬ್ರಾಂಡ್ನ ಚಪ್ಪಲಿ ತಯಾರಾಗುವುದು ಅಥಣಿಯಲ್ಲಿ. ಆದರೆ ಹೆಸರು ಬಂದಿದ್ದು ಮಾತ್ರ ಕೊಲ್ಲಾಪುರ್ ಅಂತ. 12ನೇ ಶತಮಾನದಿಂದಲೂ ಈ ಉದ್ಯೋಗವನ್ನು ನಮ್ಮ ಸಮುದಾಯ ಮಾಡಿಕೊಂಡು ಬರುತ್ತಿದೆ. ಗಡಿ ಹೊಂದಿರುವ ಮಹಾರಾಷ್ಟ್ರದಲ್ಲಿ ಮಾರುಕಟ್ಟೆ ಇರುವುದರಿಂದ, ಅಥಣಿ ಮಾರುಕಟ್ಟೆಯಿಂದ ಅಲ್ಲಿ ಮಹಾರಾಷ್ಟ್ರ ಕೊಲ್ಲಾಪುರದಲ್ಲಿ ಮಾರಲಾಗುತ್ತಿತ್ತು. ಕೊಲ್ಲಾಪುರದಿಂದ ದೇಶ ವಿದೇಶಗಳಲ್ಲಿ ರಪ್ತು ಆಗಿರೋದ್ರಿಂದ ಕೊಲ್ಲಾಪುರಿ ಹೆಸರೆಂದು ಬ್ರಾಂಡ್ ಆಗಿದೆ. ತಯಾರಕರು ನಾವು, ಆದರೆ ಹೆಸರು ಮಾತ್ರ ಬೇರೆಯವರಾಗಿದೆ. ಈ ಚಪ್ಪಲಿಗಳು ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿದೆ" ಎಂದರು.